ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಯುವ ಜನೋತ್ಸವ-ಎಚ್.ಐ.ವಿ/ಏಡ್ಸ್ ಅರಿವು ಆಂದೋಲನ ೨೦೨೪-೨೫ರ ಕಾರ್ಯಕ್ರಮದ ಅಂಗವಾಗಿ(ರೆಡ್ ರಿಬ್ಬನ್ ಓಟ, ಎಚ್.ಐ.ವಿ/ಏಡ್ಸ್ ನಿಯಂತ್ರಣಕ್ಕಾಗಿ ಯುವಜನತೆ) ಎಚ್.ಐ.ವಿ/ಏಡ್ಸ್ ಜಾಗೃತಿಗಾಗಿ ಮ್ಯಾರಾಥಾನ್ ಸ್ಪರ್ಧೆಯು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಇವರ ಸಹಯೋಗದೊಂದಿಗೆ ನಡೆದ ಮ್ಯಾರಾಥಾನ್(೫ ಕಿ.ಮೀ) ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಒಟ್ಟು ೮೩ ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಹಸಿರು ನಿಶಾನೆ ಮುಖಾಂತರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮುರಳಿಧರ್ ಅಂಥೋನಿ ಡಿಸೋಜ, ಮಹಾಬಲ, ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾದ ಬಿಂದ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ಯೋತಿ, ಸಿಬ್ಬಂದಿಗಳು ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.
ಮ್ಯಾರಾಥಾನ್ ಸ್ಪರ್ಧೆಯು ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮಾನ್ಸ್ ಕಾಂಪೌಂಡ್, ಮಡಿಕೇರಿಯಿಂದ ಪ್ರಾರಂಭವಾಗಿ, ನಗರದ ಪ್ರಮುಖ ಬೀದಿಗಳಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್, ಜನರಲ್ ತಿಮ್ಮಯ್ಯ ಸರ್ಕಲ್(ಜಿ.ಟಿ ಸರ್ಕಲ್) ಮುಖಾಂತರ ಹಾದು ಜನರಲ್ ತಿಮ್ಮಯ್ಯ ಕ್ರೀಡಾಂಗಣವನ್ನು ತಲುಪಿತು. ಮ್ಯಾರಾಥಾನ್ ಸಂಚರಿಸುವ ಮಾರ್ಗದಲ್ಲಿ, ಆಟೋ ಪ್ರಚಾರದ ಮುಖಾಂತರ ಎಚ್.ಐ.ವಿ/ಏಡ್ಸ್ ಬಗ್ಗೆ ಅರಿವು ಮೂಡಿಸಲಾಯಿತು.
ವಿಜೇತರವ ವಿವರ: ಬಾಲಕರ ವಿಭಾಗದಲ್ಲಿ ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎಸ್.ಗೌತಮ್(ಪ್ರ), ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎಚ್.ಪ್ರತಾಪ್(ದ್ವಿ), ಸೋಮವಾರಪೇಟೆ ಸೆಂಟ್ ಜೋಸೆಪ್‌ನ ದೀಪಕ್ ಎಸ್.ಯು(ತೃ) ಹಾಗೂ ವಿರಾಜಪೇಟೆ ಕಾವೇರಿ ಕಾಲೇಜಿನ ತಕ್ಷಕ್ ಬಿದ್ದಪ್ಪ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಗೌತಮ್.ಪಿ.ಸಿ., ವಿರಾಜಪೇಟೆ ಕಾವೇರಿ ಕಾಲೇಜಿನ ರೋಶನ್ ಉತ್ತಪ್ಪ ಮತ್ತು ಮಡಿಕೇರಿ ಎಫ್‌ಎಂಸಿ ಕಾಲೇಜಿನ ಪೃಥ್ವೀಶ್ ಎಂ.ಆರ್ ಅವರು ಸಮಾದಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಪೊನ್ನಂಪೇಟೆ ಕೂರ್ಗ್ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿನ ಚೋಂದಮ್ಮ.ಕೆ.ಟಿ.(ಪ್ರ), ಮಡಿಕೇರಿ ಎಫ್‌ಎಂಸಿ ಕಾಲೇಜಿನ ನಿಲಿಶಾ ಜೋಜೋ(ದ್ವಿ), ಸೋಮವಾರಪೇಟೆ ಸಂತ ಜೋಸೆಪ್ ಶಾಲೆಯ ಐಶ್ವರ್ಯ.ಕೆ.ವೈ(ತೃ) ಹಾಗೂ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೌನ.ಎಚ್.ಎಸ್, ಮಡಿಕೇರಿ ಎಫ್‌ಎಂಸಿ ಕಾಲೇಜಿನ ಭೂಮಿಕಾ.ಕೆ.ಆರ್, ವಿರಾಜಪೇಟೆ ಕಾವೇರಿ ಕಾಲೇಜಿನ ಕಾವ್ಯ.ಎನ್.ಆರ್ ಮತ್ತು ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ಮೇಘನಾ.ಬಿ.ಎಂ ಅವರು ಸಮಾದಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಾದ, ಗೌತಮ್.ಎಸ್ ಮತ್ತು ಚೋಂದಮ್ಮ.ಕೆ.ಟಿ ಇವರು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮ್ಯಾರಥಾನ್ ಸ್ಪರ್ಧೆಯಲ್ಲಿ ವಿಜೇತರು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.