ಜಿಲ್ಲೆ

ಬಿಜೆಪಿ ಮಹಿಳಾ ಮೋರ್ಚಾದಿಂದ ಮ್ಯಾರಥಾನ್

ಆರ್.ಕೃಷ್ಣ

ಮೈಸೂರು: ‘ನಾರಿ ಶಕ್ತಿ’ ಕಾರ್ಯಕ್ರಮದ ಅಡಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸೋಮವಾರ ರನ್ ಫಾರ್ ನೇಷನ್, ರನ್ ಫಾರ್ ಮೋದಿ ಮ್ಯಾರಥಾನ್ ನಡೆಸಲಾಯಿತು.
ನಗರದ ನ್ಯಾಯಾಲಯದ ಮುಂಭಾಗದಿಂದ ಬಿಜೆಪಿ ಕಚೇರಿವರೆಗೆ ಮ್ಯಾರಥಾನ್ ನಡೆಯಿತು. ನ್ಯಾಯಾಲಯದ ಮುಂಭಾಗದಿಂದ ಆರಂಭವಾದ ಮ್ಯಾರಥಾನ್ ಎಂ.ಜಿ.ರಸ್ತೆ, ಆರ್‌ಟಿಒ, ರಾಮಸ್ವಾಮಿ ವೃತ್ತದ ಮೂಲಕ ಬಿಜೆಪಿ ಕಚೇರಿ ಬಳಿ ಸಮಾರೋಪಗೊಂಡಿತು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾರಿ ಶಕ್ತಿ ವಂದನ ಮೂಲಕ ಪ್ರತಿ ರಾಜ್ಯದಲ್ಲಿನ ಸ್ವಸಹಾಯ ಸಂಘಗಳಿಗೆ ನಗರ ಮತ್ತು ಗ್ರಾಮೀಣ ಭಾಗದ ಸ್ತ್ರೀಯರಿಗೆ ಕೇಂದ್ರದ ಹಲವು ಯೋಜನೆಗಳನ್ನು ತಲುಪಿಸುವುದು ಹಾಗೂ ತಿಳಿವಳಿಕೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಹಲವಾರು ಯೋಜನೆಗಳು ಸ್ವ-ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿವೆ. ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮೋದಿ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಕೈಗೊಂಡಿರುವ ಯೋಜನೆಗಳನ್ನು ನಗರ ಹಾಗೂ ಗ್ರಾಮದ ಪ್ರತಿಯೊಬ್ಬ ಸ್ತ್ರೀಯರಿಗೂ ಮುಟ್ಟಿಸುವ ಕೆಲಸವಾಗಬೇಕು ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ.ಗಿರಿಧರ್, ಕೇಬಲ್ ಮಹೇಶ್, ಬಿ.ಎಂ.ರಘು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಲಾ, ಮಮತಾ ಶೆಟ್ಟಿ, ಮಹಿಳಾ ವಿಭಾಗದ ಪ್ರಭಾರಿ ಹೇಮಾ ನಂದೀಶ್, ಮಾಜಿ ಉಪ ಮೇಯರ್ ಡಾ.ರೂಪಾ, ನಗರಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಲಕ್ಷ್ಮೀಕಿರಣ್ ಗೌಡ, ಸೌಭಾಗ್ಯ ಮೂರ್ತಿ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನಿಲ್ ಥಾಮಸ್, ಮುಖಂಡರಾದ ಎನ್.ವಿ.ಪಣೀಶ್, ಹೇಮಂತ್ ಕುಮಾರ್ ಗೌಡ, ಜಯಪ್ರಕಾಶ್ ಗೌಡ, ಕಿರಣ್‌ಗೌಡ ಮತ್ತಿತರರಿದ್ದರು.