ಜಿಲ್ಲೆ

ಮರಾಠಾ ಸಮುದಾಯವನ್ನು 2ಎ ಗೆ ಸೇರಿಸಿ

Uttara Kannada - Subash Hegde

ಕಾರವಾರ : ಕ್ಷತ್ರಿಯ ಮರಾಠಾ ಸಮಾಜವು, ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು ಸಮಾಜವನ್ನು ಹಿಂದುಳಿದ ವರ್ಗದ 3ಬಿಯಿಂದ 2ಎಗೆ ಸೇರಿಸಬೇಕು ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟದ ಅಧ್ಯಕ್ಷ ಶ್ಯಾಮಸುಂದರ ಗಾಯಕ್‌ವಾಡ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ರಾಷ್ಟ್ರೀಯ ಕಾರ್ಯಕ್ರಮವಾಗಿ ಆಚರಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರ ಭೇಟಿಯಾಗಿ ಮನವಿ ಮಾಡಲಿದ್ದೇವೆ ಎಂದರು.
ಕ್ಷತ್ರಿಯ ಮರಾಠಾ ಸಮಾಜವು ಕರ್ನಾಟಕದಲ್ಲಿ 45 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಬೆಳಗಾವಿ, ಉತ್ತರ ಕನ್ನಡ, ಚಿಕ್ಕೋಡಿ, ಬೀದರ್, ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮರಾಠಾ ಸಮುದಾಯವು ಈ ಎಲ್ಲ ಕ್ಷೇತ್ರಗಳಲ್ಲಿ ಮತದ ವಿಚಾರದಲ್ಲಿ ನಿರ್ಣಾಯಕವಾಗಿದ್ದರೂ ಸಮುದಾಯಕ್ಕೆ ನಿರೀಕ್ಷಿತ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಹಾಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ೩ ಹಾಗೂ ಕಾಂಗ್ರೆಸ್‌ನಿಂದ 3 ಕ್ಷೇತ್ರಗಳಿಗೆ ಮರಾಠಾ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು. ರಾಜ್ಯ ಕಾರ್ಯದರ್ಶಿ ಪಾಂಡುರಂಗ ಪಾಟೀಲ, ಜನಾರ್ಧನ ಗಾಂವಕರ್,  ರಾಜೇಶ ಆರೇರ್ ಸುದ್ದಿಗೋಷ್ಠಿಯಲ್ಲಿದ್ದರು.

ಬನವಾಸಿಯಲ್ಲಿ ರಾಜ್ಯೋತ್ಸವ
ಕರ್ನಾಟಕ ಕ್ಷತ್ರಿ ಮರಾಠಾ ಮಹಾ ಒಕ್ಕೂಟದಿಂದ ನ.26 ರಂದು ಬನವಾಸಿಯಲ್ಲಿ ಬೆಳಗ್ಗೆ 10 ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭವಾನಿ ದತ್ತ ಪೀಠದ ಪೀಠಾಧೀಶ್ವರ ಮಂಜುನಾಥ ಸ್ವಾಮೀಜಿ, ಕಿತ್ತೂರು ಕಾದರವಳ್ಳಿಯ ಗುರುಪುತ್ರಪ್ಪ ಮಹಾರಾಜ್, ಮುಂಡಗೋಡ ಸಾಲಗಾಂವ್‌ನ ವಿರೂಪಾಕ್ಷ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ಭೂಷಣ ಪುರಸ್ಕಾರ ನೀಡಲಾಗುವುದು ಎಂದು ಶ್ಯಾಮಸುಂದರ ಗಾಯಕ್‌ವಾಡ್ ವಿವರಿಸಿದರು