ಜಿಲ್ಲೆ

ಮಾರಮ್ಮದೇವಿ ಜಾತ್ರೆ ಸಂಪನ್ನ

ಶಿವರಾಜ.ಎಂ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಹದಿನೆಂಟು ಗ್ರಾಮಗಳ ಜನರು ಒಗ್ಗೂಡಿ ಮಾಡುವ ಹೆಗ್ಗುಂದ ಮಾರಮ್ಮ ಜಾತ್ರೆಯು ಗುರುವಾರ ಅದ್ದೂರಿ ಮೆರವಣಿಗೆಯೊಂದಿಗೆ ಸಂಪನ್ನವಾಯಿತು.
ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ದೇವಿಗೆ ವಿಶೇಷ ಪೂಜೆ, ವಿಶೇಷ ಪುಷ್ಪಾಲಂಕಾರ ನೆರವೇರಿಸಿ ದೇವಿಯ ಮೂರ್ತಿಯನ್ನು ತಮಟೆ, ವಾದ್ಯಗಳೊಂದಿಗೆ 18 ಹಳ್ಳಿಗಳಿಗೆ ಮಡಿಲಕ್ಕಿ ಸೇವೆ ಹಾಗೂ ಪೂಜೆಗೆ ಕರೆದೊಯ್ಯಲಾಯಿತು.
ನರಸೀಪುರದ ವೀರಭದ್ರಾಚಾರ್ ಕುಟುಂಬ ಮತ್ತು ಶ್ಯಾನುಭೋಗ ಸುಂದರ್ ಮನೆಯಲ್ಲಿ ಪ್ರಥಮ ಪೂಜೆ ಹಾಗೂ ಹಳೇ ಊರು ಆಂಜನೇಯ ದೇವಾಲಯ ಬಳಿ ಪೂಜೆ ನೆರವೇರಿತು.
ಕೆಲ ಗ್ರಾಮಗಳಿಗೆ ಮೊದಲ ದಿನ ದೇವಿಯನ್ನು ಕರೆದೊಯ್ದು, ದೇವಾಲಯಗಳು ಹಾಗೂ ಮನೆ ಮನೆಗಳಲ್ಲಿ ಪೂಜಾ ಕಾರ್ಯ ನೆರವೇರಿತು. ಐದು ದಿನಗಳವರೆಗೆ 18 ಹಳ್ಳಿಗಳ ಪ್ರತಿ ಮನೆಗಳಲ್ಲಿ ಮಡಿಲಕ್ಕಿ ಸೇವೆ, ತಂಬಿಟ್ಟಿನ ಆರತಿ ನೆರವೇರಿತು.