ಜಿಲ್ಲೆ

ಅಂತರ್ ಗ್ರಾಮ ಕ್ರೀಡಾಕೂಟಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮರಗೋಡಿನಲ್ಲಿರುವ ಭಾರತೀ ಪ್ರೌಢಶಾಲಾ ಮೈದಾನದಲ್ಲಿ ಮರಗೋಡು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಆಯೋಜಿಸಿರುವ ಅಂತರ್ ಗ್ರಾಮ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಕೋಚನ ಶ್ರೀನಿವಾಸ್, ಎಲೆಮರೆ ಕಾಯಿಗಳಂತಿರುವ ಗ್ರಾಮೀಣ ಪ್ರತಿಭೆ ಗಳನ್ನ ಬೆಳಕಿಗೆ ತರುವಲ್ಲಿ ಗ್ರಾಮೀಣ ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.

ಮರಗೋಡು, ಕಟ್ಟೆಮಾಡು, ಅರೆಕಾಡು, ಹೊಸ್ಕೇರಿ ಹಾಗೂ ಐಕೊಳ ಗ್ರಾಮಸ್ಥರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಪುರುಷರಿಗೆ ವಾಲಿಬಾಲ್, ಕಬ್ಬಡ್ಡಿ, ಹಗ್ಗಜಗ್ಗಾಟ, ಫುಟ್ಬಾಲ್ ಪಂದ್ಯಾವಳಿ ನಡೆಯಿತು. ಮಹಿಳೆಯರ ವಿಭಾಗದ ಥ್ರೋಬಾಲ್, ಕಬ್ಬಡ್ಡಿ, ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.ಭಾನುವಾರ ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿವೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮರಗೋಡು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಕೋಚನ ಅನೂಪ್, ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ, ರಾಜ್ಯ ಒಕ್ಕಲಿಗರ ಸಂಘ ಉಪಾಧ್ಯಕ್ಷ ಡಾ ಕೆ.ವಿ. ರೇಣುಕಾಪ್ರಸಾದ್, ಉದ್ಯಮಿ ಬಿದ್ರುಪಣೆ ವಿ ಗಣೇಶ್, ಹಸೈನಾರ್, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ನಿರ್ದೇಶಕ ಡಿ.ಕೆ. ಅರುಣ್ ಮತ್ತಿತರರು ಇದ್ದರು.