ಗುಳೇದಗುಡ್ಡ: ಪಟ್ಟಣದಲ್ಲಿ ಮಠಗಳು ಸೌಹಾರ್ದಯುತ ಸಂಬಂಧಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹಲವಾರು ಜಾತಿ, ಜನಾಂಗಗಳು, ಮಠಮಂದಿರಗಳು ಇದ್ದರೂ ಎಲ್ಲರೂ ಭಾವೈಕ್ಯತೆಯಿಂದ ಬದುಕುತ್ತಿದ್ದಾರೆ. ಆ ಪರಂಪರೆಗೆ ಮರಡಿ ಮಠ ತನ್ನದೇ ಕೊಡುಗೆ ನೀಡಿದೆ ಎಂದು ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು ಹೇಳಿದರು.
ಪಟ್ಟಣದ ಚೌಬಜಾರದಲ್ಲಿ ಗೆಳೆಯರ ಬಳಗದ ವತಿಯಿಂದ ಶ್ರೀ ಮರಡಿಮಠದ ಶ್ರೀ ಕಾಡಸಿದ್ಧೇಶ್ವರ ಮಹಾಸ್ವಾಮಿಗಳವರ ಐದನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮಹಾಪ್ರಸಾದ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೌನಯೋಗಿ ಎಂದೇ ಪ್ರಸಿದ್ಧಿ ಪಡೆದ ಮರಡಿ ಮಠದ ಕಾಡಸಿದ್ಧೇಶ್ವರ ಶಿವಾಚಾರ್ಯರು ತಮ್ಮ ಬದುಕಿನುದ್ದಕ್ಕೂ ಎಲ್ಲರನ್ನೂ ಸಮನವಾಗಿ ಕಂಡು, ಎಲ್ಲರ ಏಳಿಗೆಗೆ ಶ್ರಮಿಸಿದ್ದಾರೆ. ಅವರ ಆದರ್ಶಗಳು ನಮಗೆಲ್ಲ ಮಾರ್ಗದರ್ಶಕವಾಗಿವೆ ಎಂದರು.
ಕಾಡಸಿದ್ಧೇಶ್ವರ ಶಿವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಸಾರ್ವಜನಿಕರಿಗೆ ಅನ್ನಪ್ರಸಾದ ವಿತರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಪ್ರಕಾಶ ಮುರಗೋಡ, ಮಲ್ಲಿಕಾರ್ಜುನ ಹಿರೇಮಠ, ಚಂದ್ರಶೇಖರ ಹರವಿ, ಸಿದ್ದು ನಾಯನೇಗಲಿ, ಅಮರೇಶ ಯಳಮೇಲಿ, ಬಸವರಾಜ ಸಿಂದಗಿಮಠ, ಸೂರಜ ಮಲಜಿ, ಮಲ್ಲು ಹಡಗಲಿ, ಪ್ರವೀಣ ದೇವಗಿರಕರ, ಮುತ್ತು ಮೊರಬದ, ಶಾಂತವೀರಯ್ಯ ಹುಚ್ಚೇಶ್ವರಮಠ, ಮಹಾದೇವ ಗೌಳಿ, ಸಿದ್ದಯ್ಯ ರೇವಣಸಿದ್ಧೇಶ್ವರಮಠ, ಗುರು ಹಂಡಿ ಮತ್ತಿತರರಿದ್ದರು.