ಜಿಲ್ಲೆ

ಮಾಪಲ ರಸ್ತೆ ಮೋರಿ ಕುಸಿತ

Dakshina Kannada

ಕಡಬ: ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯಡಿ ಆಲಂಕಾರು- ಸುರುಳಿ-ಮಾಪಲ ರಸ್ತೆಯ ಅಭಿವೃದ್ಧಿ ಕಾಮಗಾರಿ ಸಾಗುತ್ತಿದ್ದು, ಈ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೋರಿ ಕುಸಿದು ಅಪಾಯ ಎದುರಾಗಿದೆ.

ಮಡಿಕೇರಿ-ಸುಳ್ಯ-ಬೆಳ್ಳಾರೆ-ಧರ್ಮಸ್ಥಳಕ್ಕೆ ಸಂಪರ್ಕಿಸುವ ಈ ರಸ್ತೆಯಲ್ಲಿ ಬರುವ ಕುಮಾರಧಾರಾ ನದಿಗೆ ಶಾಂತಿಮೊಗರು ಎಂಬಲ್ಲಿ ಸರ್ವಋತು ಸೇತುವೆ ಎರಡು ವರ್ಷದ ಹಿಂದೆ ಲೋಕಾರ್ಪಣೆಯಾದ ಬಳಿಕ ಸೇತುವೆ ಸಂಪರ್ಕಿಸುವ ರಸ್ತೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದರ ಭಾಗವಾಗಿ ಆಲಂಕಾರು ಮಾಪಲ ರಸ್ತೆ ಅಭಿವೃದ್ಧಿಯಾಗುತ್ತಿದೆ.

5 ಕೋಟಿ ರೂ. ಅನುದಾನದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಕಳೆದ ವರ್ಷದಿಂದ ಈ ಕಾಮಗಾರಿ ಆರಂಭವಾಗಿದ್ದು, ಪ್ರಾರಂಭದಿಂದಲೂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಈ ಯೋಜನೆಯಲ್ಲಿ ಕುದ್ಮಾರಿನಿಂದ ಆಲಂಕಾರು ಸಂಪರ್ಕಿಸುವ ಸುಮಾರು 800 ಮೀಟರ್ ರಸ್ತೆಯನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದು, ಉಳಿದಂತೆ ಆಲಂಕಾರಿನಿಂದ ಮಾಪಲದವರೆಗೆ 8.5 ಕಿ.ಮೀ. ರಸ್ತೆಯನ್ನು 5.5 ಅಡಿ ವಿಸ್ತರಣೆ ಮತ್ತು ಡಾಂಬರು ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಪ್ರಾರಂಭದಿಂದಲೂ ಕಳಪೆ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬರುತ್ತಿತ್ತು. ಕಳಪೆ ಕಾಮಗಾರಿಗೆ ಸಾಕ್ಷಿಯಂತೆ ಈಗಾಗಲೇ ಡಾಂಬರುಗೊಂಡಿರುವ ಕುದ್ಮಾರಿನಲ್ಲಿ ರಸ್ತೆ ಕುಸಿದಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿದೆ.

ಕಾಮಗಾರಿಯ ಕಾರ್ಯವೈಖರಿ ಬಗ್ಗೆ ಪರಿಶೀಲಿಸಲಾಗುವುದು. ಈಗಾಗಲೇ ಕುಸಿತಗೊಂಡಿರುವ ಮೋರಿಯನ್ನು ಶೀಘ್ರವೇ ತೆರವುಗೊಳಿಸಿ ನೂತನ ಮೋರಿ ಅಳವಡಿಸಲಾಗುವುದು. ನಿರ್ಮಾಣಗೊಂಡಿರುವ ಚರಂಡಿಯನ್ನು ಪರಿಶೀಲಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಎಲ್.ಸಿ.ಸಿಕ್ವೇರಾ ಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಪುತ್ತೂರು ವಿಭಾಗ