ಜಿಲ್ಲೆ

ಕಲಿಕೆ 'ಕಲೆಯೊಂದಿಗೆ' ಗಳಿಕೆ..!

ಕಾಲೇಜು ಶಿಕ್ಷಣದೊಂದಿಗೆ ಆದಾಯ

ಕುಟುಂಬಕ್ಕೆ ಯುವ ಪ್ರತಿಭೆ ಮಾನ್ಯಾ ಸಹಾಯ

ಪ್ರಶಾಂತ ಭಾಗ್ವತ ಉಡುಪಿ

ಎಲ್ಲ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಸರಿಯಾದ ಪ್ರೋತ್ಸಾಹ, ಮಾರ್ಗದರ್ಶನ ದೊರೆತರೆ ಸಾಧಕರಾಗಲು ಸಾಧ್ಯ. ಲಭಿಸಿದ ಅವಕಾಶವನ್ನೇ ಬಳಸಿಕೊಂಡು ಸಣ್ಣ ವಯಸ್ಸಿನಲ್ಲೇ ಪೇಂಟಿಂಗ್​ ಆರ್ಟಿಸ್ಟ್​ ಆಗಿ ಮಿಂಚುತ್ತಿರುವ ಯುವ ಪ್ರತಿಭೆ ಮಾನ್ಯಾ ಎ. ಯಶೋಗಾಥೆಯಿದು.

ಈಗಷ್ಟೇ ದ್ವಿತೀಯ ಪಿಯುಸಿ ಮುಗಿಸಿರುವ ಮಾರ್ಪಳ್ಳಿಯ ಕೊರಂಗ್ರಪಾಡಿಯ ಮಾನ್ಯಾ, ಕಾಲೇಜು ಶಿಕ್ಷಣದೊಂದಿಗೆ ವಿವಿಧ ಬಗೆಯ ಪೇಂಟಿಂಗ್ಸ್​ ರಚಿಸಿ, ಸಿಗುವ ಆದಾಯದಿಂದ ಕುಟುಂಬಕ್ಕೂ ಆಸರೆಯಾಗಿದ್ದಾಳೆ.

ವಿವಿಧ ಕಲೆಗಳು

ಚಿತ್ರಕಲೆಗಳ ವಿವಿಧ ಪ್ರಕಾರಗಳಾದ ಎಕ್ರೆಲಿಕ್​, ಕ್ಯಾನ್​ವಾಸ್​, ವಾಟರ್​ ಕಲರ್​, ಬಾಲ್​ಪೆನ್​ ಆರ್ಟ್​, ವಾಲ್​ ಪೇಂಟ್​ಗಳಲ್ಲಿ ಬಗೆಬಗೆಯ ಚಿತ್ರಗಳನ್ನು ರಚಿಸಿ ಜೀವಕಳೆ ನೀಡುತ್ತಾಳೆ. ಲೈವ್​ ಆರ್ಟ್​ ಕಲೆಯನ್ನೂ ಕರಗತ ಮಾಡಿಕೊಂಡಿದ್ದು ಈವರಗೆ 5 ಪ್ರದರ್ಶನ ನೀಡಿದ್ದಾಳೆ. ಸಾವಿರಾರು ಚಿತ್ರಗಳನ್ನು ರಚಿಸಿ, ಮಾರಾಟ ಮಾಡಿದ್ದಾಳೆ.

600ರಿಂದ 20 ಸಾವಿರ ರೂ.!

ಮಾನ್ಯಾಳ ಕಲೆಗೆ ಮಾನ್ಯತೆ ಲಭಿಸತೊಡಗಿದೆ. ಫ್ರೇಮ್​ ಹಾಕಿರುವ ಸಣ್ಣ ಫೋಟೋ ಕನಿಷ್ಠ 600 ರೂ.ನಿಂದ, 3ರಿಂದ 4 ಅಡಿ ಉದ್ದದ ಫೋಟೋಗಳು 20 ಸಾವಿರ ರೂ.ಬೆಲೆ ಹೊಂದಿದೆ. ಕ್ಯಾನ್​ವಾಸ್​ಗಳಲ್ಲಿ ರವಿವರ್ಮ ಚಿತ್ರಿಸಿದ ಖ್ಯಾತ ಚಿತ್ರಗಳು, ಮೈಸೂರಿನ ಎಸ್​.ಎಲ್​. ಹಲ್ಡನಕರ್​ ಅವರ 'ಹೋಪ್​ ಆಫ್​ ಲೈಟ್​' (ದೀಪದ ಬೆಳಕಿನ ಹಿಂಭಾಗದಲ್ಲಿ ಕಾಣುವ ಮಹಿಳೆ)ನ ಎಕ್ರೆಲಿಕ್​ ಪೇಂಟಿಂಗ್ಸ್​, ಪೊಟ್ರೇಟ್​ (ಮನುಷ್ಯರ ಚಿತ್ರ)ಗಳಲ್ಲಿ ಸಾಹಿತಿಗಳಾದ ಕುವೆಂಪು, ದ.ರಾ. ಬೇಂದ್ರೆ ಹಾಗೂ ಧ್ಯಾನ ಸ್ಥಿತಿಯಲ್ಲಿರುವ ಗೌತಮ ಬುದ್ಧನ ಫೋಟೋಗಳಿಗೆ ಬೇಡಿಕೆ ಇದೆ. ಯಾರ ಭಾವಚಿತ್ರವನ್ನಾದರೂ ಸಿದ್ಧಪಡಿಸುತ್ತಾಳೆ.

ಯುವ ಸಮುದಾಯಕ್ಕೆ ಮಾದರಿ

ತಂದೆ ಫೋಟೋಗ್ರಾರ್​, ತಾಯಿ ಕಾಲೇಜೊಂದರಲ್ಲಿ ಲೈಬ್ರೇರಿಯನ್​, 8ನೇ ತರಗತಿಯಲ್ಲಿ ಕಲಿಯುತ್ತಿರುವ ಸಹೋದರನಿರುವ ಪುಟ್ಟ ಕುಟುಂಬ ಆಕೆಯದ್ದು. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ಮಾತಿಗೆ, ಹೆತ್ತವರಿಗೆ ಹೊರೆಯಾಗದೆ ಸಂಪಾದನೆಯನ್ನೂ ಮಾಡುತ್ತಿರುವ ಮಾನ್ಯಾ, ಯುವ ಸಮುದಾಯಕ್ಕೆ ಮಾದರಿಯಾಗಿದ್ದಾಳೆ.

ಸಾಧನೆಗೆ ಸಮಯಕೊಟ್ಟ ಲಾಕ್​ಡೌನ್​

ಏಳನೇ ತರಗತಿಯಲ್ಲಿದ್ದಾಗ ಮಾನ್ಯಾಳಿಗೆ ಚಿತ್ರಕಲೆಯತ್ತ ಆಸಕ್ತಿ ಮೂಡಿತು. 2020ರಲ್ಲಿ ಕರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಶಾಲೆ ಇಲ್ಲದ್ದರಿಂದ ಹೆಚ್ಚಿನ ಸಮಯ ಚಿತ್ರ ಬಿಡಿಸುತ್ತಿದ್ದಳು. ಇಂದಿನ ಸಾಧನೆ ಹಂತಕ್ಕೆ ಲಾಕ್​ಡೌನ್​ ವರವಾಯಿತು. ಹೈಸ್ಕೂಲ್​ಗೆ ಹೋಗುವಾಗ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಳು. 2018ರಲ್ಲಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಬಿಜೆಪಿ ಆಯೋಜಿಸಿದ್ದ ಚಿತ್ರಸ್ಪರ್ಧೆ, 2021ರಲ್ಲಿ ಅಂಚೆ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧೆ, 2022ರಲ್ಲಿ ಉಡುಪಿ ಲೈನ್ಸ್​ ಕ್ಲಬ್​ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ, 2021-22ರಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ನಿಮಿತ್ತ ಮಾಹೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ದ್ವಿತೀಯ, 2022ರಲ್ಲಿ ಗದಗದಲ್ಲಿ ನಡೆದ ರಾಜ್ಯ ಮಟ್ಟದ 'ಚಿಣ್ಣರ ಚಿತ್ರ ಚಿತ್ತಾರ' ಸ್ಪರ್ಧೆಯಲ್ಲಿ 'ಲಿಟ್ಲ್​ ಆರ್ಟಿಸ್ಟ್​' ಪ್ರಶಸ್ತಿ, 2023ರಲ್ಲಿ ನೆಹರು ಯುವ ಕೇಂದ್ರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ದ್ವಿತೀಯ ಹೀಗೆ ಸಾಧನೆಗಳ ಪಟ್ಟಿ ಬೆಳೆಯುತ್ತದೆ.
ನನಗೆ ಪೇಂಟಿಂಗ್​ ಲೈವ್​ ಆರ್ಟಿಸ್ಟ್​ ವಿಲಾಸ ನಾಯಕ ಪ್ರೇರಣೆ. 7ನೇ ತರಗತಿಯಿಂದ ಈವರೆಗೂ ಇಂದ್ರಾಳಿಯ ಚಿತ್ರಕಲಾವಿದ, ಶಿಕ್ಷಕ ಸುಧಾಕರ ಆಚಾರ್ಯ ಅವರಲ್ಲಿ ಕಲಿಕೆ ಮುಂದುವರಿಸಿದ್ದೇನೆ. ಈಗಷ್ಟೇ ಪಿಯುಸಿ ಮುಗಿದಿದ್ದು ಇಂಜಿನಿಯರಿಂಗ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಶಿಕ್ಷಣದೊಂದಿಗೆ ಕಲೆಯನ್ನೂ ಮುಂದುವರಿಸುವೆ. ಅನೇಕರಿಂದ ಪೇಂಟಿಂಗ್ಸ್​ ಬೇಡಿಕೆಯೂ ಬರುತ್ತಿದೆ. | ಮಾನ್ಯಾ ಎ. ಯುವ ಚಿತ್ರ ಕಲಾವಿದೆ. ಉಡುಪಿ ಮಗಳ ಪ್ರತಿಭೆ ನಿಜಕ್ಕೂ ಹೆಮ್ಮೆ ತಂದಿದೆ. ಜಿಲ್ಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮ, ಮೇಳ-ಸಮ್ಮೇಳನಗಳ ಮಳಿಗೆಗಳಲ್ಲಿ ಮಾನ್ಯಾ ರಚಿಸಿದ ಚಿತ್ರಗಳ ಪ್ರದರ್ಶನ, ಮಾರಾಟ ಮಾಡುತ್ತೇವೆ. ಜನರಿಂದ ಭಾರಿ ಮೆಚ್ಚುಗೆಯಿದೆ. ಚಿತ್ರಗಳನ್ನು ಖರೀದಿಸಿ ಪ್ರೋತ್ಸಾಹಿಸುತ್ತಿದ್ದಾರೆ. | ಅಶೋಕ ಮಾರ್ಪಳ್ಳಿ. ಮಾನ್ಯಾಳ ತಂದೆ.