ಜಿಲ್ಲೆ

ವಿಜ್ಞಾನ ಮೇಳದ ಪೆಂಡಾಲ್ ಕುಸಿದು ಹಲವು ವಿದ್ಯಾರ್ಥಿಗಳಿಗೆ ಗಾಯ

Dakshina Kannada

ಉಪ್ಪಳ: ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಬೃಹತ್ ಪೆಂಡಾಲ್ ಕುಸಿದು ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಮಕ್ಕಳ ವಿಜ್ಞಾನಮೇಳ ಗುರುವಾರ ಹಾಗೂ ಶುಕ್ರವಾರ ಉಪ್ಪಳ ಸಮೀಪದ ಬಾಯಾರು ರಸ್ತೆಯ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಉಪಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಲ್ಲ ಶಾಲೆಗಳ ಮೂರು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಈ ಸಮಾರಂಭಕ್ಕೆ ಶಾಲಾ ಮೈದಾನದಲ್ಲಿ ಅಳವಡಿಸಲಾದ ಬೃಹತ್ ಚಪ್ಪರ ಕುಸಿದು ಬಿದ್ದಿದೆ. ಈ ವೇಳೆ ಚಪ್ಪರದಡಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರಿದ್ದು ಹಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಗಾಯಗೊಂಡವರನ್ನು ಉಪ್ಪಳ, ಮಂಗಲ್ಪಾಡಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಮಂಗಳೂರಿನ ಆಸ್ಪತ್ರೆಗೂ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.