ಜಿಲ್ಲೆ

ಮಹಿಳೆಯರ ಸಬಲೀಕರಣಕ್ಕೆ ಹಲವು ಕಾರ್ಯಕ್ರಮ: ವೀಣಾ ಅಚ್ಚಯ್ಯ

ಆದರ್ಶ್. ಎಂ.ಕೆ.

ಮಡಿಕೇರಿ: ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ತಿಳಿಸಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದಲ್ಲಿ ನಗರ ದಸರಾ ಸಮಿತಿ ವತಿಯಿಂದ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


ಮಹಿಳೆಯರು ರಾಜಕೀಯ, ಆರ್ಥಿಕ, ವಾಣಿಜ್ಯ, ಆಡಳಿತ, ಬಾಹ್ಯಾಕಾಶ, ಕ್ರೀಡೆ, ಸಿನಿಮಾ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪಟ್ಟಣ, ನಗರ ಮತ್ತು ಬೃಹತ್ ನಗರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರಿಗೂ ಅವಕಾಶಗಳು ಒದಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಮಹಿಳಾ ದಸರಾವು ಮಹಿಳೆಯರ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಆ ನಿಟ್ಟಿನಲ್ಲಿ ಅವಕಾಶಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುವಂತಾಗಬೇಕು. ಮಹಿಳೆಯರು ಸಾಮಾಜಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಮತ್ತಷ್ಟು ತೊಡಗಿಸಿಕೊಂಡಲ್ಲಿ ಶ್ರೇಯೋಭಿವೃದ್ಧಿ ಮತ್ತಷ್ಟು ಹೆಚ್ಚಲಿದೆ. ರಾಷ್ಟ್ರದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಹೆಚ್ಚಿನದ್ದಾಗಿದೆ ಎಂದು ನುಡಿದರು.


ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.೫೦ರಷ್ಟು ಮೀಸಲು ಶೀಘ್ರ ಜಾರಿಯಾಗಬೇಕು. ಮಹಿಳಾ ಮತ್ತು ಪುರುಷ ಸಮಾನವಾಗಿ ಬದುಕಿದಾಗ ಸಮಾಜ ಅಭಿವೃದ್ಧಿ ಸಾಧ್ಯ ಎಂಬುದನ್ನು ಮರೆಯುವಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಗಂಡು-ಹೆಣ್ಣು ಸಮಾನರು ಎಂಬುದನ್ನು ಅರಿತುಕೊಳ್ಳಬೇಕು ಎಂದರು.


ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ದಸರಾ ಸಂದರ್ಭದಲ್ಲಿಯೂ ದುರ್ಗೆ, ಚಾಮುಂಡಿ, ಹೆಸರಿನಲ್ಲಿ ದಸರಾವನ್ನು ಆಚರಿಸುವುದು ವಿಶೇಷವಾಗಿದೆ. ಮಹಿಳೆಯರು ಎಲ್ಲಾ ರಂಗಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ತ್ರೀ ಎಂದರೆ ಆತ್ಮಶಕ್ತಿ, ಆದಿಶಕ್ತಿ ಎಂಬುದನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.


ಮಹಿಳಾ ದಸರಾಗೆ ದಿವ್ಯ ಮಂತರ್ ಗೌಡ ಅವರು ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜು, ನಗರಸಭಾ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ರಾಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು ಇತರರು ಇದ್ದರು.


ಅನಿಲ್ ಎಚ್.ಟಿ. ಸ್ವಾಗತಿಸಿದರು. ಅನಿತಾ ನಿರೂಪಿಸಿದರು. ಮಹಿಳಾ ದಸರಾ ಸಂಚಾಲಕರಾದ ಕುಡೆಕಲ್ ಸವಿತಾ ಸಂತೋಷ್ ಅವರು ವಂದಿಸಿದರು.