ಸೋಮವಾರಪೇಟೆ: ಕಾಫಿ ಕೊಯ್ಲು ಮಾಡುವ ಮಹಿಳಾ ಕಾರ್ಮಿಕರನ್ನು ಬುಧವಾರ ಕರೆದೊಯ್ಯುತ್ತಿದ್ದ ಓಮ್ನಿ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಮಗುಚಿದ ಪರಿಣಾಮ ಕಾರ್ಮಿಕರು ಪವಾಡ ಸದೃಶವಾಗಿ ಬದುಕುಳಿದಿದ್ದಾರೆ.
ವ್ಯಾನ್ ಕೆರೆಗೆ ಮಗುಚಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಮದಲಾಪುರದ ಜ್ಯೋತಿ, ಲಕ್ಷ್ಮೀ, ಮನು, ಸೀತಮ್ಮ, ರತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹಾನಗಲ್ಲು ಗ್ರಾಮದ ಶಿವಣ್ಣ ಅವರು ತಮ್ಮ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ಮಾಡಿಸಿ, ಸಂಜೆ ಯಡೂರು ಮಾರ್ಗವಾಗಿ ಬರುವಾಗ ಗ್ರಾಮದ ದೇವರಕೆರೆಗೆ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಮಗುಚಿದೆ. ರಾಜ್ಯ ಹೆದ್ದಾರಿಯಲ್ಲಿ ಕೆರೆ ಇದ್ದು, ಕೆರೆ ತಟದಲ್ಲಿ ರೇಲಿಂಗ್ಸ್ ಅಳವಡಿಸದ ಹಿನ್ನೆಲೆಯಲ್ಲಿ ಅನಾಹುತಕ್ಕೆ ದಾರಿಯಾಗಿದೆ. ಮಲ್ಲಳ್ಳಿ ಜಲಪಾತ, ಪುಷ್ಪಗಿರಿಗೆ ತೆರಳಲು ಪ್ರವಾಸಿಗರು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ. ಇನ್ನಾದರೂ ಲೋಕೋಪಯೋಗಿ ಇಲಾಖೆ ಕೆರೆಯ ಸುತ್ತ ತಡೆಗೋಡೆ ಅಳವಡಿಸಬೇಕೆಂದು ಯಡೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.