ರಾಜಾ ಕಾಲುವೆ ನೀರು ಹಾಗೂ ಕೆಸರು ತುಂಬಿದ ದತ್ತಾತ್ರೇಯ ದೇವಾಲಯ ಆವರಣ ಸ್ವಚ್ಛತಾ ಕಾರ್ಯ. 
ಜಿಲ್ಲೆ

ಮಳೆ ಪ್ರವಾಹಕ್ಕೆ ಸಿಲುಕಿ ಪಾರಾಗಿ ಮರುಜನ್ಮ ಪಡೆದರು!

| ಸತೀಶ್ ಕೆ.ಬಳ್ಳಾರಿ ಬೆಂಗಳೂರು

ಹೊಸಕೆರೆಹಳ್ಳಿಯಲ್ಲಿ ಶುಕ್ರವಾರ ಸಂಜೆ ಭಾರಿ ಮಳೆಯಿಂದಾಗಿ ನೀರಿನಲ್ಲಿ ಮುಳುಗಿ ಹೋಗಬೇಕಾದ ಜೀವಗಳನ್ನು ರಾಜ್ಯ ವಿಪತ್ತು ಸ್ಪಂದನಾ ಪಡೆ ರಕ್ಷಣೆ ಮಾಡಿದೆ. ಪ್ರವಾಹಕ್ಕೆ ಸಿಲುಕಿ ಜಲಸಮಾಧಿ ಆಗಬೇಕಿದ್ದವರು ಸಾವಿನದವಡೆಯಿಂದ ಪಾರಾದ ಬಗೆ ರೋಚಕವಾಗಿದೆ.

ಅಜ್ಜಿಯ ರಕ್ಷಣೆ: ದತ್ತಾತ್ರೇಯನಗರದ ಅನಸೂಯ ಕಲ್ಯಾಣ ಮಂಟಪದ ಹಿಂಭಾಗದ ಮನೆಯಲ್ಲಿ ಮೇಲೇಳಲು ಆಗದ ಅಜ್ಜಿ ಮಲಗಿದ್ದರು. ಮನೆಯವರೆಲ್ಲಾ ಹೊರಗೆ ತೆರಳಿದ್ದರು. ಸಂಜೆ 4.30ಕ್ಕೆ ಮನೆಗೆ ನೀರು ನುಗ್ಗಲು ಆರಂಭವಾಗಿದ್ದು, ಅಜ್ಜಿ ಇದ್ದ ಮಂಚದ ಸುತ್ತಲೂ ನೀರು ನುಗ್ಗಿದೆ. ಇನ್ನೇನು ಮುಳುಗಿ ಹೋಗುವ ಸಂದರ್ಭದಲ್ಲಿ ಡೂಪ್ಲೆಕ್ಸ್ ಮೆಟ್ಟಿಲುಗಳ ಮೂಲಕ ಮನೆಯೊಳಗೆ ಕುಟುಂಬದವರು ಧಾವಿಸಿ ತಕ್ಷಣವೇ ಸ್ಥಳಾಂತರಿಸಿದ್ದಾರೆ. ಅಜ್ಜಿ ರಕ್ಷಣೆಯ ಬಳಿಕ ಮನೆಯಲ್ಲಿ 9 ಅಡಿವರೆಗೆ ನೀರು ತುಂಬಿಕೊಂಡಿತ್ತು. ಸಕಾಲಕ್ಕೆ ತೆರಳದಿದ್ದರೆ ಜಲಸಮಾಧಿ ಆಗುತ್ತಿದ್ದರು ಎಂದು ಕುಟುಂಬದವರು ಆತಂಕ ವ್ಯಕ್ತಪಡಿಸಿದರು.

ಸೀರೆಯಿಂದ ದೇವಾಲಯ ಸಿಬ್ಬಂದಿ ರಕ್ಷಣೆ: ದತ್ತಾತ್ರೇಯ ಮಠದಲ್ಲಿ ಶುಕ್ರವಾರ ಸಂಜೆ ಸ್ವಾಮೀಜಿ ಹೊರಗೆ ಹೋಗಿದ್ದರು. ಐವರು ಪರಿಚಾರಕರು ಎಂದಿನಂತೆ ದೇವಾಲಯದ ಕಾರ್ಯದಲ್ಲಿ ನಿರತರಾಗಿದ್ದರು. ಪಕ್ಕದ ರಸ್ತೆಯಲ್ಲಿ 3 ಅಡಿ ನೀರು ತುಂಬಿಕೊಳ್ಳುತ್ತಿದ್ದಂತೆ, ಅಲ್ಲಿನ ಸಿಬ್ಬಂದಿಯನ್ನು ಸ್ಥಳೀಯ ಮಹಿಳೆ ತುಳಸಿ ಎಂಬುವರು ಬಂದು ಸೀರೆಯನ್ನು ಎಸೆದು ರಕ್ಷಣೆ ಮಾಡಿದರು. ಅವರು ರಕ್ಷಣೆ ಮಾಡದಿದ್ದಲ್ಲಿ ಜೀವವೇ ಹೋಗುತ್ತಿತ್ತು ಎಂದು ಸಿಬ್ಬಂದಿ ಮಾಹಿತಿ ನೀಡಿದರು.

ಬೋಟ್ ತಂದು 120 ಪ್ರಾಣ ಉಳಿಸಿದರು: ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್​ಡಿಆರ್​ಎಫ್) ಸಿಬ್ಬಂದಿ ಮಳೆ ಕಡಿಮೆಯಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾಗಿ ನೀರಿನಲ್ಲಿ ಸಿಲುಕಿದ್ದ ಜನರನ್ನು ರಬ್ಬರ್ ದೋಣಿಗಳ ಮೂಲಕ ರಕ್ಷಣೆ ಮಾಡಿದರು. 120ಕ್ಕೂ ಹೆಚ್ಚು ಮಂದಿ ಒಂಟಿ ಮನೆಗಳಲ್ಲಿ ಮಂಚಗಳ ಮೇಲೆ ನಿಂತುಕೊಂಡು ಜೀವ ಹಿಡಿದು ಕೊಂಡಿದ್ದರು. ಮನೆಗಳಿಗೆ ನುಗ್ಗಿ ನೀರಿನಲ್ಲಿ ಸಿಲುಕಿದ್ದವರನ್ನು ಬೋಟ್​ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತಂದು ಬಿಟ್ಟರು.

ಜೀವ ಪಣಕ್ಕಿಟ್ಟು ಮಗುವಿನ ರಕ್ಷಣೆ: ದತ್ತಾತ್ರೇಯನಗರದಲ್ಲಿ ಮಗುವೊಂದು ಮಳೆ ನೀರಿನಲ್ಲಿ ತೇಲಿ ಹೋಗುತ್ತಿದ್ದಾಗ ಸ್ಥಳೀಯ ಯುವಕನೊಬ್ಬ ರಕ್ಷಿಸಿದ್ದಾನೆ. ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಮನೆಗಳೆಲ್ಲ ನೀರಿನಲ್ಲಿ ಮುಳುಗಿವೆ. ಈ ವೇಳೆ ಮಗುವೊಂದು ನೀರಿನಲ್ಲಿ ತೇಲಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕ ಪ್ರವಾಹ ಲೆಕ್ಕಿಸದೆ ಈಜುತ್ತಾ ಮಗುವನ್ನು ರಕ್ಷಿಸಿದ್ದಾನೆ. ಮಗು ಹಾಗೂ ನೀರಿನಲ್ಲಿ ಹೇಗೆ ಬಿದ್ದಿತು ಎಂಬ ಮಾಹಿತಿ ಸಿಕ್ಕಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.