ಶಿಡ್ಲಘಟ್ಟ: ಶಾಲೆಗಳು ಸಮುದಾಯದ ಪ್ರಮುಖ ಭಾಗವಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಮತ್ತು ಸದೃಢ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗಾಗಿ ಹಲವು ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ರೇಣುಕಾ ತಿಳಿಸಿದರು.
ತಾಲೂಕಿನ ಸುಗಟೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ‘ನಮ್ಮ ಶಾಲೆ, ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಅನುಭವಿ ಅರ್ಹ ಶಿಕ್ಷಕರು, ಸುಸಜ್ಜಿತ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಡಿಜಿಟಲ್ ಬೋಧನಾ ಸವಲತ್ತುಗಳು ಲಭ್ಯವಿದೆ. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಶೂ ಸಾಕ್ಸ್, ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳು ಕ್ರೀಡೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು, ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಂತಹ ಚಟುವಟಿಕೆಗಳಲ್ಲೂ ಗಣನೀಯ ಸಾಧನೆ ಮಾಡುತ್ತಿದ್ದಾರೆ ಎಂದರು.ತಾಲೂಕು ಅಕ್ಷರದಾಸೋಹ ಸಹಾಯಕ ಶಿಕ್ಷಣಾಧಿಕಾರಿ ಆಂಜನೇಯ ಮಾತನಾಡಿ, ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಬಹುಪೌಷ್ಟಿಕಾಂಶ ಕೊರತೆ ನಿವಾರಿಸಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಾರದ ಆರು ದಿನಗಳೂ ಮೊಟ್ಟೆ, ಬಾಳೆಹಣ್ಣು ವಿತರಣೆ, ಕ್ಷೀರಭಾಗ್ಯ, ಶುಚಿ-ರುಚಿಯಾದ ಬಿಸಿಯೂಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎಚ್.ಪ್ರಸನ್ನಕುಮಾರ್ ಮಾತನಾಡಿ, ಜನಸಮುದಾಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಿಗಬಹುದಾದ ಶೈಕ್ಷಣಿಕ ಸೌಲಭ್ಯಗಳು ಮತ್ತು ಪ್ರೋತ್ಸಾಹಗಳ ಬಗ್ಗೆ ಅರಿವು ಮೂಡಬೇಕಿದೆ. ಮಕ್ಕಳಲ್ಲಿ ನಿರಂತರ ಹಾಜರಾತಿ ಮತ್ತು ಕಲಿಕೆ ಕಡೆಗೆ ಪಾಲಕರು ಗಮನವಹಿಸಬೇಕಿದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಸಿಗುವ ಶೈಕ್ಷಣಿಕ ಸೌಲಭ್ಯಗಳು ಮತ್ತು ಪ್ರೋತ್ಸಾಹಗಳು, ದಾಖಲಾತಿ ಹೆಚ್ಚಳ ಮತ್ತು ಹಾಜರಾತಿ ಕಾಯ್ದುಕೊಳ್ಳುವ ಬಗ್ಗೆ ಪಿಪಿಟಿ ಪ್ರದರ್ಶನ, ಸಮೀಕ್ಷೆ, ಚರ್ಚೆ ನಡೆಯಿತು.ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ, ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಎಸ್‌ಡಿಎಂಸಿ ಸದಸ್ಯ ಎಸ್.ಎಲ್.ನಾರಾಯಣಸ್ವಾಮಿ, ಸದಸ್ಯೆ ಬಿ.ಆರ್.ಸಾವಿತ್ರಮ್ಮ, ಗ್ರಾಪಂ ಸದಸ್ಯ ಎ. ಸತೀಶ್‌ಕುಮಾರ್, ಮುಖ್ಯಶಿಕ್ಷಕಿ ಜಿ.ಎನ್.ನೇತ್ರಾವತಿ, ಪಿ.ಗೀತಾ, ಟಿ.ಕೆ.ಮಂಜುಳಮ್ಮ, ಅಜೀಂಪ್ರೇಮ್‌ಜಿ ಫೌಂಡೇಶನ್‌ನ ಪ್ರತಿನಿಧಿಗಳಾದ ರಾಜು, ಗಜೇಂದ್ರ, ಹೋಬಳಿಯ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು.