ಶಿವಮೊಗ್ಗ: ನಾನು ಬಿಜೆಪಿಗೆ ಹೋಗಬೇಕೋ, ಬೇಡವೋ ಎಂಬುದನ್ನು ಮುಂದೆ ನಿರ್ಧಾರ ಮಾಡುತ್ತೇನೆ. ಪಕ್ಷ ಸೇರ್ಪಡೆಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಡಿಸಿಎಂವರೆಗೆ ಹಲವು ಜವಾಬ್ದಾರಿಗಳನ್ನು ಬಿಜೆಪಿ ನೀಡಿದೆ. ಕುಟುಂಬ ರಾಜಕಾರಣದಿಂದ ಪಕ್ಷ ಹಾಳಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಆಗಲಿಲ್ಲ. ಈ ಕಾರಣಕ್ಕೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದೆ. ಈಗ ಪಕ್ಷಕ್ಕೆ ವಾಪಸ್ ಬರುವಂತೆ ಹಲವರು ಸಂಪರ್ಕಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಕುಟುಂಬ ರಾಜಕಾರಣದಿಂದ ಬಿಜೆಪಿ ಹೊರಬರಬೇಕು ಎನ್ನುವುದು ನನ್ನ ಉದ್ದೇಶ. ಕೇಂದ್ರದಲ್ಲಿ ಇಲ್ಲದಿರುವುದು ರಾಜ್ಯದಲ್ಲಿ ಏಕಿದೆ?. ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುವುದನ್ನು ನಾನು ನೋಡಿರಲಿಲ್ಲ. ಆದರೆ ಶಿಕಾರಿಪುರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಯಿತು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನನ್ನ ಭಿಕ್ಷೆಯಿಂದ ಗೆದ್ದಿರುವುದಾಗಿ ವಿಜಯೇಂದ್ರಗೆ ಹೇಳಿದ್ದರು. ಹಾಗಾದರೆ ಆ ಭಿಕ್ಷೆ ಏನು ಎಂಬುದನ್ನು ವಿಜಯೇಂದ್ರ ಬಹಿರಂಗಪಡಿಸಬೇಕು ಎಂದು ಸವಾಲೆಸೆದರು.