ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹಲವು ದೋಷಗಳು ಕಂಡುಬಂದಿರುವ ಬೆನ್ನಲ್ಲೇ ಬಿಪಿಎಲ್ ಮಾಹಿತಿ ನೀಡಲು ಕಾರ್ಡ್‌ದಾರರು ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ರೇಷನ್ ಕಾರ್ಡ್ ಸಂಖ್ಯೆ, ಬಿಪಿಎಲ್ ಕಾರ್ಡ್ ಇದೆಯೇ? ಸೇರಿ ಒಟ್ಟು 60 ಪ್ರಶ್ನಾವಳಿಯನ್ನು ಸಮೀಕ್ಷೆಯಲ್ಲಿ ಕೇಳಲಾಗಿದೆ. ಸಮೀಕ್ಷೆಯಲ್ಲಿ ಈ ಮಾಹಿತಿಯನ್ನು ನೀಡಿದರೆ ಸರ್ಕಾರವು, ಮಾನದಂಡ ಉಲ್ಲಂಘಿಸಿದ ಕಾರಣ ಆಧಾರದಲ್ಲಿ ಬಿಪಿಎಲ್, ಅಂತ್ಯೋದಯ ಚೀಟಿ ರದ್ದುಪಡಿಸಲಿದೆ ಎಂಬ ಆತಂಕವೂ ಲಕ್ಷಾಂತರ ಫಲಾನುಭವಿಗಳಿಗೆ ಕಾಡುತ್ತಿದೆ. ಹಾಗಾಗಿ, ಕಾರ್ಡ್ ರದ್ದಾಗುವ ಭಯದಿಂದ ಸಾಕಷ್ಟು ಕಾರ್ಡ್‌ದಾರರು, ಸಮೀಕ್ಷೆ ಸಂದರ್ಭದಲ್ಲಿ ಮನೆ ಬಾಗಿಲಿಗೆ ಬರುವ ಗಣತಿದಾರರಿಗೆ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ.
ರಾಜಧಾನಿಯಲ್ಲಿ ಆರ್ಥಿಕವಾಗಿ ಸಧೃಡ ಹೊಂದಿರುವ ಸಾಕಷ್ಟು ಕುಟುಂಬಗಳ ಬಿಪಿಎಲ್ ಚೀಟಿ ಇದೆ. ಇವೆರಲ್ಲರಿಗೂ ಚೀಟಿ ರದ್ದಾಗುವ ಆತಂಕದಿಂದ ಸಮೀಕ್ಷೆಯಲ್ಲಿ ಕಾರ್ಡ್‌ನ ಮಾಹಿತಿ ನೀಡುತ್ತಿಲ್ಲ. ಅಲ್ಲದೆ, ಜಿಲ್ಲಾ ಮತ್ತು ತಾಲೂಕಿನಲ್ಲಿ ಕೆಲ ಗಣತಿದಾರರು, ಕಡ್ಡಾಯವಾಗಿ ಮಾಹಿತಿ ನೀಡುವಂತೆ ಕಾರ್ಡ್‌ದಾರರಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ಬಗ್ಗೆ ದೂರುಗಳಿವೆ. ಸಮೀಕ್ಷೆಯಲ್ಲಿ ರೇಷನ್ ಕಾರ್ಡ್‌ನ ಮಾಹಿತಿ ನೀಡುವುದು ಕಡ್ಡಾಯವಲ್ಲ. ಒಂದು ವೇಳೆ ಮಾಹಿತಿ ನೀಡಿದರೆ ಕಾರ್ಡ್ ರದ್ದುಗೊಳ್ಳಲ್ಲ. ಕಾರ್ಡ್‌ನ ಮಾಹಿತಿ ನೀಡುವುದು ಅಥವಾ ಬಿಡುವುದು ಕಾರ್ಡ್‌ದಾರರ ವಿವೇಚನೆಗೆ ಬಿಡಲಾಗಿದೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಬಿಪಿಎಲ್ ಅಥವಾ ಅಂತ್ಯೋದಯ ಚೀಟಿ ಇದ್ದರೆ ಹೃದಯ ಸಮಸ್ಯೆ, ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು, ರೇಷನ್, ಪಿಂಚಣಿ, ಆರ್‌ಟಿಇ ಅಡಿ ಶಿಕ್ಷಣ ಸೇರಿ ಇತರ ಸರ್ಕಾರಿ ಸೌಕರ್ಯ ಪಡೆದುಕೊಳ್ಳಬಹುದು. ಅಲ್ಲದೆ, ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಕಾರ್ಡ್ ರದ್ದುಗೊಂಡರೆ ಸರ್ಕಾರಿ ಸೌಲಭ್ಯವೂ ಸ್ಥಗಿತಗೊಳ್ಳಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,93,29,981 ಫಲಾನುಭವಿಗಳಿಗೆ 1,16,51,209 ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ. ಹೆಚ್ಚುವರಿ ಕಾರ್ಡ್‌ಗಳಿಗೆ ರಾಜ್ಯ ಸರ್ಕಾರ ದೊಡ್ಡ ಮೊತ್ತ ಭರಿಸಿ ಉಚಿತವಾಗಿ ಅಕ್ಕಿ ನೀಡುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳುತ್ತಿದೆ. ಹಾಗಾಗಿ, ಸರ್ಕಾರದ ಮಾನದಂಡ ಉಲ್ಲಂಸಿ ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ಆಹಾರ ಇಲಾಖೆ ರದ್ದುಪಡಿಸುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ 4,56,675 ಬಿಪಿಎಲ್ ಚೀಟಿ ರದ್ದಾಗಿವೆ. ಲಕ್ಷಾಂತರ ಕಾರ್ಡ್‌ನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.