ಜಿಲ್ಲೆ

ಪ್ರಶ್ನೆ ಮಾಡದ್ದಕ್ಕೆ ಸೌಲಭ್ಯಗಳಿಂದ ವಂಚಿತ ; ಹೈ-ಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಅನಿಸಿಕೆ

ಮಾನ್ವಿ: ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಅಧಿನಿಯಮದ ಆನ್ವಯ ಮೀಸಲಾತಿ ದೊರೆತರೂ ಈ ಭಾಗದ ಯುವ ಸಮೂಹದಲ್ಲಿನ ಪ್ರಶ್ನೆಮಾಡುವ ಮನೋಭಾವದ ಕೊರತೆಯಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದು ಹೈ-ಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಹೇಳಿದರು.

ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಈ ಭಾಗದವರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.

371 ಜೆ ಅಡಿ ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿಯೂ ಈ ಭಾಗದವರಿಗೆ ಸೀಟುಗಳನ್ನು ಪಡೆಯಲು ಅವಕಾಶವಿದೆ. ಯುವ ಸಮೂಹ ಪ್ರಶ್ನೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ರಜಾಕ್ ಉಸ್ತಾದ್ ಸಲಹೆ ನೀಡಿದರು. ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೂಲಕ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ.ಸುರೇಶ ಶರಣಪ್ಪ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಾಲಾಜಿ ಸಿಂಗ್, ಪಿ.ರವಿಕುಮಾರ, ಡಾ.ಈರಣ್ಣ ಮರ್ಲಟ್ಟಿ, ಕ್ರಿಡಾ ಸಂಚಾಲಕ ಡಾ.ರಾಘವೇಂದ್ರ, ಸಾಂಸ್ಕೃತಿಕ ಸಂಚಾಲಕಿ ಶೋಭಾ, ಉಪನ್ಯಾಸಕರಾದ ಸುಮಿತ್ರಾ ಪ್ಯಾಟಿ, ಸುಧಾ, ಶಿವರಾಜ, ಚನ್ನಬಸವ, ಸಚಿನ್, ಬಸವರಾಜ ಇತರರಿದ್ದರು.