ಮಾನ್ವಿ: ಅಕಾಲಿಕ ಮಳೆ, ಬಿರುಗಾಳಿಯಿಂದ ತಾಲೂಕಿನ ಹಿರೇಕೊಟ್ನೆಕಲ್, ಗವಿಗಟ್ಟು ಸೇರಿ ವಿವಿಧ ಗ್ರಾಮಗಳಲ್ಲಿ ನೂರಾರು ಎಕರೆ ಭತ್ತ ನೆಲಕಚ್ಚಿದ್ದು, ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರೈತರಿಗೆ ಮುಂಗಾರಿನಲ್ಲಿ ಭತ್ತದ ಬೆಳೆ ಅಷ್ಟೇನು ಲಾಭ ತಂದಿಲ್ಲ. ತುಂಗಭದ್ರಾ ಎಡದಂಡೆ ಕಾಲುವೆಯಿಂದ ಸಮರ್ಪಕ ನೀರು ಬಾರದಿದ್ದರೂ ರೈತರು ಹಿಂಗಾರು ಬೆಳೆಗೆ ಕೊಳವೆ ಬಾವಿ, ಹಳ್ಳಕ್ಕೆ ಹರಿದು ಬರುವ ನೀರಿನಿಂದ ಭತ್ತ ಬೆಳೆದಿದ್ದಾರೆ. ಫಸಲು ಸಹ ಉತ್ತಮವಾಗಿತ್ತು. 10-15 ದಿನಗಳಲ್ಲಿ ಕಟಾವು ಮಾಡಬೇಕಾಗಿತ್ತು. ಆದರೆ, ಈಗ ಸುರಿದ ಮಳೆಗೆ ರೈತರು ತತ್ತರಿಸಿದ್ದಾರೆ. ಹಿರೇಕೊಟ್ನೆಕಲ್, ಗವಿಗಟ್ಟು, ಹಳ್ಳಿಹೊಸೂರು, ಭೋಗಾವತಿ, ನಕ್ಕುಂದಿ ಸೇರಿ ಇತರ ಗ್ರಾಮಗಳಲ್ಲಿ ಶನಿವಾರ ಬೀಸಿದ ಗಾಳಿ, ಮಳೆಗೆ 300 ಎಕರೆಗೂ ಹೆಚ್ಚು ಭತ್ತದ ಬೆಳೆಗೆ ಹಾನಿಯಾಗಿದೆ ಎನ್ನಲಾಗಿದೆ.
ಎಕರೆಗೆ 25 ಸಾವಿರ ರೂ. ಅಧಿಕ ಖರ್ಚು ಮಾಡಲಾಗಿದೆ. ಸುಮಾರು ಎಂಟು ಎಕರೆ ಭತ್ತದಲ್ಲಿ 3-4 ಎಕರೆ ಭತ್ತ ಗಾಳಿ, ಮಳೆಗೆ ನೆಲಕ್ಕೆ ಉರುಳಿದೆ. ಇದರಿಂದ ಭತ್ತ ಕಟಾವು ಮಾಡಲು ತೊಂದರೆಯಾಗುತ್ತದೆ ಎಂದು ರೈತ ಮಹಾದೇವಪ್ಪ ಹಿರೇಕೊಟ್ನೆಕಲ್ ಅಳಲು ತೊಡಿಕೊಂಡರು.
ಬೇಸಿಗೆಯಲ್ಲಿ ಬೆಳೆದ ಭತ್ತಕ್ಕೆ ಉತ್ತಮ ಬೆಲೆ ಇಲ್ಲ. ಈಗಾಗಲೇ 75 ಕೆಜಿ ಭತ್ತದ ಚೀಲಕ್ಕೆ 1300 ರೂ.ಯಿಂದ 1400 ರೂ. ವರೆಗೆ ಇದೆ. ಈ ಬೆಲೆಗೆ ಮಾರಾಟ ಮಾಡಿದರೆ ಖರ್ಚು ಮಾಡಿದ ಹಣ ಬರುವುದಿಲ್ಲ. ಮುಂಗಾರು, ಹಿಂಗಾರು ಬೆಳೆಗಳಲ್ಲಿ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಏನು ಮಾಡಿದೆ ?. ರೈತನಿಗೆ ಇತ್ತ ಬೆಳೆದ ಬೆಳೆ ಕೈ ಸೇರದೆ, ಉತ್ತಮ ಬೆಲೆ ಇಲ್ಲದೆ ಅತಂತ್ರದಲ್ಲಿ ಸಿಲುಕಿದ್ದಾನೆ. ಈಗಾದರೂ ಅಕಾಲಿಕ ಮಳೆಗೆ ನಷ್ಟವಾದ ಭತ್ತಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯವಾಗಿದೆ.
ಇನ್ನೊಂದು ವಾರ ಮಳೆ ಬಾರದಿದ್ದರೆ ಬೆಳೆ ಕೈ ಸೇರುತ್ತಿತ್ತು. ಆದರೆ, ಅಕಾಲಿಕ ಮಳೆಯಿಂದ ಗಾಯದ ಮೇಲೆ ಬರೆ ಎಳೆದಿದೆ. ಸದ್ಯ ಒಂದು ಎಕರೆ ಭತ್ತ ಕಟಾವಿಗೆ 2500 ರೂ.ಯಿಂದ 3 ಸಾವಿರ ರೂ. ಖರ್ಚು ಬರುತ್ತದೆ. ನೆಲಕ್ಕೆ ಉರುಳಿದ ಭತ್ತ ಕಟಾವು ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಹಣ ಕೇಳಲಾಗುತ್ತದೆ. ಹಿಂಗಾರು ಹಂಗಾಮು ಭತ್ತಕ್ಕೆ ಹೆಚ್ಚಿನ ಖರ್ಚು ಬಂದಿತ್ತು. ಇನ್ನೂ ಅದೇ ಸಾಲ ತೀರಿಲ್ಲ. ಈಗ ಬೆಳೆ ನಷ್ಟದಿಂದ ಸಾಲಗಾರರ ಕಾಟ ಹೆಚ್ಚಾಗುತ್ತದೆ ಎಂದು ರೈತರು ಗೋಳಾಡುತ್ತಿದ್ದಾರೆ.
ಅಕಾಲಿಕ ಮಳೆಯಿಂದ ಭತ್ತದ ಬೆಳೆ ಹಾನಿಯಾಗುತ್ತದೆ ಎಂದು ರೈತರು ತರಾತುರಿಯಲ್ಲಿ ಕಟಾವು ಮಾಡಲು ಮುಂದಾಗಿದ್ದಾರೆ. ಕೆಲವೆಡೆ ಇನ್ನೂ ಭತ್ತ ಹಸಿ ಇದೆ. ಈ ಹಂತದಲ್ಲಿ ಕಟಾವು ಮಾಡುವುದರಿಂದ ಇಳುವರಿ ಕಡಿಮೆಯಾಗಲಿದೆ. ಗಾಳಿಗೆ ಭತ್ತ ನೆಲಕ್ಕೆ ಉರುಳಿದರೆ ಬೆಳೆಯಲ್ಲ ನಷ್ಟವಾಗಲಿದೆ. ಅದಕ್ಕಾಗಿ ಭತ್ತ ಕಟಾವು ಮಾಡಲಾಗುತ್ತಿದೆ ಎಂದು ರೈತ ಹನುಮಂತ ತಿಳಿಸಿದರು.
ರೈತರ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇಲ್ಲ. ಪ್ರತಿ ವರ್ಷ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಸಿಕ್ಕ ಬೆಲೆಗೆ ಮಾರಾಟ ಮಾಡುವಂತಹ ಪರಸ್ಥಿತಿ ಬಂದಿದೆ. ಅಕಾಲಿಕ ಮಳೆಯಿಂದ ನಷ್ಟವಾದ ಬೆಳೆಗಳಿಗೆ ಸರ್ಕಾರ ತ್ವರಿತವಾಗಿ ಪರಿಹಾರ ನೀಡಬೇಕು. | ಮಹೇಶ ಪಾಟೀಲ್ ರೈತ, ಗವಿಗಟ್ಟು ರೈತ