ರಾಷ್ಟ್ರ ರಕ್ಷಣೆಗಾಗಿ ನಾಗರಿಕರ ಸಮಿತಿಯಿಂದ ಮಾನ್ವಿ ವಾಲ್ಮೀಕಿ ವೃತ್ತದಲ್ಲಿ ತಿರಂಗಾ ಯಾತ್ರೆ ನಡೆಯಿತು. 
ಜಿಲ್ಲೆ

ಘಾತುಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ

ಮಾನ್ವಿ: ಉಗ್ರರ ನೆಲೆ ಧ್ವಂಸ ಮಾಡಿದ ಭಾರತೀಯ ವೀರ ಸೈನಿಕರಿಗೆ ತಿರಂಗಾ ಯಾತ್ರೆ ಮೂಲಕ ಗೌರವ ಸಲ್ಲಿಸಲಾಗಿದೆ ಎಂದು ರಾಷ್ಟ್ರ ರಕ್ಷಣೆಗಾಗಿ ನಾಗರಿಕರ ಸಮಿತಿ ತಾಲೂಕು ಸಂಚಾಲಕ ರೇವಣಸಿದ್ದಯ್ಯ ಹಿರೇಮಠ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ಬಸವ ವೃತ್ತ, ಸಿಂಧನೂರು ರಸ್ತೆ ವಾಲ್ಮೀಕಿ ವೃತ್ತದವರೆಗೆ ನಡೆದ ತಿರಂಗಾ ಯಾತ್ರೆಯಲ್ಲಿ ಬುಧವಾರ ಮಾತನಾಡಿದರು.

ಇತ್ತೀಚೆಗೆ ಆಪರೇಷನ್ ಸಿಂಧೂರ ಯಶಸ್ವಿಯಾಗಿಸಿದ ದೇಶದ ಸೈನಿಕರ ಆತ್ಮ ಸ್ಥೈರ್ಯ ಮೆಚ್ಚಲೇಬೇಕು ಎಂದ ಅವರು, ಜಾತಿ-ಧರ್ಮ, ಮತ-ಪಂಥ, ಭೇದ-ಭಾವವಿಲ್ಲದೆ ನಾವೆಲ್ಲರೂ ಭಾರತೀಯರು ಎಂಬ ಮನಸ್ಥಿತಿ ಬೆಳೆಸಿಕೊಂಡಾಗ ಮಾತ್ರ ದೇಶ ಸುರಕ್ಷಿತವಾಗಿರುವುದಕ್ಕೆ ಸಾಧ್ಯ ಮತ್ತು ದೇಶದೊಳಗಿನ ಘಾತುಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಚನ್ನರೆಡ್ಡಿ ಮಾತನಾಡಿ, ಕಾಶ್ಮೀರದಲ್ಲಿನ ಪಹಲ್ಗಾಮ್‌ನಲ್ಲಿ ಉಗ್ರರು ಧರ್ಮ ಕೇಳಿ 27 ಮಂದಿ ನಾಗರಿಕರನ್ನು ಹತ್ತೆ ಮಾಡಿದ್ದರ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ. ತಿರಂಗಾ ಯಾತ್ರೆ ಮೂಲಕ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ಗೌರವ ಸಲ್ಲಿಸೋಣ ಎಂದರು.

ತಿರಂಗಾ ಯಾತ್ರೆಗೆ ಚೀಕಲಪರ್ವಿ ರುದ್ರಮನೀಶ್ವರ ಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಕರೆಗುಡ್ಡ ಮಹಾಂತೇಶ ಮಠದ ಮಹಾಂತಲಿಂಗ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಸೈಯದ್ ಸಜ್ಜದ್ ಹುಸೇನಿ ಮತವಾಲ್, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ರಾಜಾ ವೆಂಕಟಪ್ಪ ನಾಯಕ, ಮುಖಂಡರಾದ ಡಾ.ಶರಣಪ್ಪ ಬಲ್ಲಟ್ಟಗಿ, ತಿಮ್ಮಾರೆಡ್ಡಿ ಭೋಗಾವತಿ, ರಾಜಾ ರಾಮಚಂದ್ರನಾಯಕ, ಅರೆಸೇನಾ ಪಡೆಯ ಮಾಜಿ ಯೋಧರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಸೈನಿಕರಾದ ಶಿವಯ್ಯಸ್ವಾಮಿ, ಆಂಜನೇಯ ನಾಯಕ, ಬಸವರಾಜ ಮುಸ್ಟೂರ್, ವಿಜಯೇಂದ್ರ ಸಿರವಾರ ಎಚ್.ಮೌನೇಶ್, ಹರಿಹರ ಪಾಟೀಲ್, ಜಿ.ಸುಧಾಕರ, ವೀರನಗೌಡ ವಕೀಲರು, ಅಯ್ಯಪ್ಪ ನಾಯಕ ಮ್ಯಾಕಲ್, ಡಿ.ಬಸವನಗೌಡ, ತಿಪ್ಪಣ್ಣ ಹೊಸಮನಿ, ಡಿ.ಜಿ. ಕರ್ಕಿಹಳ್ಳಿ, ಮನೋಜ ಜೈನ್, ಎಂ.ಡಿ. ಮುಜೀಬ್ ಇನ್ನಿತರರಿದ್ದರು.