ಜಿಲ್ಲೆ

ಬಂದ್‌ನಿಂದಾಗಿ ಜನಜೀವನ ಅಸ್ತವ್ಯಸ್ತ


ಮಾನ್ವಿಯಲ್ಲಿ ವಾಹನಗಳ ಸಾಲು | ಅಂಬೇಡ್ಕರ್‌ಗೆ ಅವಮಾನ ಖಂಡಿಸಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ


ಮಾನ್ವಿ : ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಪಮಾನ ಮಾಡಲಾಗಿದೆ ಎಂದು ಅರೋಪಿಸಿ ವಿವಿಧ ಸಂಘಟನೆಯವರು ಶುಕ್ರವಾರ ಮಾನ್ವಿ ಬಂದ್‌ಗೆ ಕರೆ ನೀಡಿ, ಬಸವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆಯಿಂದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿತ್ತು. ಸಂಜೆ 4ರವರೆಗೆ ವಾಹನಗಳ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಹೊರ ವಲಯದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು, ವಾಹನಗಳ ಸವಾರರು ಪರದಾಡಿದರು. ರಾಷ್ಟ್ರೀಯ ಹಬ್ಬಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ಮಾಡಬೇಕು ಆದರೆ, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆಗೆಸುವ ಮೂಲಕ ಅಪಮಾನ ಮಾಡಲಾಗಿದೆ. ಅಪಮಾನ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜತೆಗೆ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ವಕೀಲರಾದ ರವಿ ಪಾಟೀಲ್, ಗುಮ್ಮಾ ಬಸವರಾಜ, ಪ್ರಮುಖರಾದ ನರಸಪ್ಪ ಜೂಕುರು, ಬಿ.ವಿ.ರಡ್ಡಿ, ಡಾ.ರಾಜಶೇಖರ, ಪ್ರವೀಣಕುಮಾರ, ಬಸವರಾಜ ನಕ್ಕುಂದಿ, ಮಹ್ಮದ್ ಮುಜೀಬ್, ರಾಜು ತಾಳಿಕೋಟೆ, ನರಸಿಂಹ ನಾಯಕ, ಹನುಮಂತ್ರಾಯ ಕಪಗಲ್, ಶಿವರಾಜ ಉಮಳಿಹೊಸೂರು ಇತರರು ಇದ್ದರು. ಶಾಸಕ ರಾಜಾ ವೆಂಕಟಪ್ಪ ನಾಯಕ, ವಕೀಲರು, ವಿವಿಧ ಸಂಘಟನೆಯವರು ಬಂದ್ ಬೆಂಬಲಿಸಿದ್ದರು.