ಮಾನ್ವಿ ಹೊರವಲಯದ ಕೆರೆಯಲ್ಲಿ ಯುವಕ ಮುಳುಗಿ ಸಾವಿಗೀಡಾದ ವಿಷಯ ತಿಳಿದು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹಂಪಯ್ಯ ನಾಯಕ ಅವರು ಪೊಲೀಸರು, ಅಗ್ನಿಶಾಮಕ ದಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ತಹಸೀಲ್ದಾರ್ ಭೀಮರಾಯ ಇತರರಿದ್ದರು. 
ಜಿಲ್ಲೆ

ಕೆರೆ ಪಾಲಾಗಿದ್ದ ಯುವಕ ಶವವಾಗಿ ಪತ್ತೆ

ಶಾಮಸುಂದರ್ ಕೊಪ್ಪಳಕರ್

ಮಾನ್ವಿ: ಪಟ್ಟಣ ಹೊರವಲಯದ ರಬ್ಬಣಕಲ್ ಸಮೀಪದ ಖಾಸಗಿ ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಯುವಕ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾನೆ.

ಅಗ್ನಿಶಾಮಕ ದಳ ನಿರಂತರ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತಂದಿದ್ದಾರೆ. ಪಟ್ಟಣದ ಕೋನಾಪುರಪೇಟೆಯ ನಾಗರಾಜ (24) ಸೋಮವಾರ ಗೆಳೆಯರೊಂದಿಗೆ ಕೆರೆಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಆದರೆ, ನಾಗರಾಜ ಕೆಸರಿನಲ್ಲಿ ಸಿಲುಕಿ ಮುಳುಗಿದ್ದರು. ಐದು ಎಕರೆಯ ಕೆರೆ 25 ಅಡಿ ಆಳವಾಗಿದೆ ಎನ್ನಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ನಿರಂತರ ಹುಡುಕಾಟ ನಡೆಸಿತು. ಮಂಗಳವಾರ ಮಧ್ಯಾಹ್ನ 3:30ಕ್ಕೆ ನಾಗರಾಜ ಮೃತದೇಹ ಸಿಕ್ಕಿದ್ದು, ಹೊರತಂದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮಗನ ಮೃತದೇಹ ಹೊರ ತರುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ತಹಸೀಲ್ದಾರ್ ಭೀಮರಾಯ ಇತರರು ಭೇಟಿ ನೀಡಿ, ಮೃತನ ಪಾಲಕರಿಗೆ ಸಾಂತ್ವನ ಹೇಳಿದರು. ಮಾನ್ವಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.