ಜಿಲ್ಲೆ

ಮೇಕೆ ಹೊತ್ತೊಯ್ದ ಚಿರತೆ; ನೀರಮಾನ್ವಿ, ಬೆಟ್ಟದೂರು ಗ್ರಾಮಸ್ಥರಲ್ಲಿ ಆತಂಕ


ಮಾನ್ವಿ: ತಾಲೂಕಿನ ನೀರಮಾನ್ವಿಯಲ್ಲಿ ಚಿರತೆ ಮತ್ತೆ ಕಾಣಿಸಿಕೊಂಡಿದೆ. ಶನಿವಾರ ಮಧ್ಯಾಹ್ನ ಗ್ರಾಮದ ಸಿದ್ಧಾರೂಢ ಮಠದ ಹತ್ತಿರದ ಕೆನಾಲ್ ರಸ್ತೆ ಬಳಿ ಬಂದ ಚಿರತೆ ರಮೇಶ ಎನ್ನುವವರ ಮೇಕೆಯನ್ನು ಹೊತ್ತೊಯ್ದಿದೆ. ಈ ದೃಶ್ಯ ನೋಡಿರುವ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಆದರೂ, ಜನರು ಬಡಿಗೆಗಳನ್ನು ಹಿಡಿದು ಚಿರತೆಯ ಬೆನ್ನತ್ತಿದ್ದರು. ಆದರೆ, ಅದಾಗಲೇ ಚಿರತೆ ಮೇಕೆಯನ್ನು ಕೊಂದಿತ್ತು. ಗುಡ್ಡದ ಮೇಲೆ ಮೇಕೆಯ ಕಾಲು ಹಾಗೂ ಮೊಳೆಗಳು ಬಿದ್ದಿದ್ದವು.

ನೀರಮಾನ್ವಿ ಹಾಗೂ ಬೆಟ್ಟದೂರು ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರದಲ್ಲಿ ಭಯದ ವಾತಾವರಣ ಮೂಡಿದ್ದರೂ ಶಾಸಕ ರಾಜಾ ವೆಂಕಟಪ್ಪ ನಾಯಕ ಇದುವರೆಗೆ ಗ್ರಾಮಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಜನರ ಪ್ರಾಣಹಾನಿಯಾದ ನಂತರ ಭೇಟಿ ನೀಡುವುರೇ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.