ಮಾನ್ವಿ : ಮನೆಯಲ್ಲಿನ ಶುಚಿ, ರುಚಿಯಾದ ಪೌಷ್ಟಿಕಾಂಶ ಹೊಂದಿರುವ ಆಹಾರ ಸೇವಿಸಿ ಉತ್ತಮ ಆರೋಗ್ಯ ಹೊಂದಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಿವರಾಜ ವಿ.ಸಿದ್ದೇಶ್ವರ ತಿಳಿಸಿದರು.
ಪಟ್ಟಣದ ಶಾಸಕರ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೋಷಣಾ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಇತ್ತೀಚಿಗೆ ಮಾತನಾಡಿದರು. ಮಹಿಳೆಯರು, ಮಕ್ಕಳು ಸರಿಯಾದ ಆಹಾರ ದೊರೆಯದೆ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕಾಣಬಹುದಾಗಿದೆ ಎಂದರು.
ನಮ್ಮ ಆಹಾರದಲ್ಲಿ ತಾಜಾ ತರಕಾರಿ, ಬೇಳೆಕಾಳು, ಹಣ್ಣುಗಳು, ಹೈನು ಪದಾರ್ಥಗಳು ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ನಿಯಮಿತವಾಗಿ ಗರ್ಭಿಣಿಯರು, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯಬೇಕು. ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ ಬಿಡಬೇಕು. ಪೋಷಕಾಂಶಗಳಿರುವ ಆಹಾರ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆಯುವುದಕ್ಕೆ ಸಾಧ್ಯ. ಇಂದಿನ ಯುವ ಸಮೂಹ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶರು ತಿಳಿಸಿದರು.
ಪೋಷಣಾ ಮಾಸಾಚರಣೆ ಕುರಿತು ವಕೀಲ ಯಲ್ಲಪ್ಪ ಬಾದರದಿನ್ನಿ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರ ಹಾಗೂ ತರಕಾರಿಗಳ ಪ್ರದರ್ಶನ ನಡೆಯಿತು. ವಕೀಲರ ಸಂಘದ ಖಜಾಂಚಿ ದತ್ತಾತ್ರೇಯ, ಈಶಪ್ಪ ಬೈಲ್‌ಮರ್ಚೆಡ್, ವಿಶ್ವನಾಥ ಪಾಟೀಲ್ ಇನ್ನಿತರರು ಇದ್ದರು.