ಜಿಲ್ಲೆ

ಮಾನ್ವಿ ಪುರಸಭೆ ಅಧ್ಯಕ್ಷರಾಗಿ ಸುಫಿಯಾಬೇಗಂ, ಉಪಾಧ್ಯಕ್ಷರಾಗಿ ಶುಕಮುನಿ ಅವಿರೋಧ ಆಯ್ಕೆ

ಮಾನ್ವಿ: ಪುರಸಭೆ ಅಧ್ಯಕ್ಷೆಯಾಗಿ ಸುಫಿಯಾಬೇಗಂ ಖುರೇಶಿ, ಉಪಾಧ್ಯಕ್ಷರಾಗಿ ಶುಕಮುನಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಸಿಗೆ ಮೀಸಲಾಗಿತ್ತು. ಒಟ್ಟು 27 ಸ್ಥಾನಗಳಲ್ಲಿ ಕಾಂಗ್ರೆಸ್‌ನ 19, ಜೆಡಿಎಸ್‌ನ 8 ಸದಸ್ಯರಿದ್ದು, ಈ ಪೈಕಿ ಕಾಂಗ್ರೆಸ್‌ನಿಂದ ಎರಡೂ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಸಿದ್ದರು. ಪ್ರತಿಸ್ಪರ್ಧಿಗಳ ನಾಮಪತ್ರ ಸಲ್ಲಿಕೆಯಾಗದ ಕಾರಣ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಶಂಶಾಲಂ ಘೋಷಣೆ ಮಾಡಿದರು.

ಸದಸ್ಯರಾದ ಸಾಬೀರ್‌ಪಾಷಾ, ಲಕ್ಷ್ಮೀದೇವಿ ನಾಯಕ, ಶರಣಬಸವ, ಬಸವರಾಜ ಭಜಂತ್ರಿ, ನೀಲಮ್ಮ, ಸಂತೋಷಮ್ಮ, ಮೀನಾಕ್ಷಿ, ರೇವಣಸಿದ್ದಯ್ಯಸ್ವಾಮಿ, ಶೈನಾಜಾಬೇಗಂ, ಶೇಖ್ ಫರೀದ್ ಉಮರಿ ಹುಸೇನ್‌ಬಾಷಾ, ವೆಂಕಟೇಶ ನಾಯಕ, ರಶೀದಾಬೇಗಂ, ಅಮ್ಜದ್‌ಖಾನ್, ಲಕ್ಷ್ಮೀದೇವಿ, ಸೂರ್ಯ ಕುಮಾರಿ ಇದ್ದರು.

ಸಂಭ್ರಮಾಚರಣೆ: ಮಾನ್ವಿ ಪುರಸಭೆ ಆಡಳಿತ ಕೈ ವಶವಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ನೂತನ ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಮಾಜಿ ಶಾಸಕ ಹಂಪಯ್ಯನಾಯಕ, ಅಬ್ದುಲ್ ಗಫೂರ್‌ಸಾಬ್, ಬಿ.ಕೆ.ಅಮರೇಶಪ್ಪ, ರಾಜಾ ವಸಂತ ನಾಯಕ, ಬಾಲಸ್ವಾಮಿ ಕೊಡ್ಲಿ, ಎಸ್.ಎಂ.ಪಾಟೀಲ್, ಜಿ.ನಾಗರಾಜ, ಅಕ್ಬರ್‌ಸಾಬ್, ಹುಸೇನ್‌ಬೇಗ್, ಪಿ.ತಿಪ್ಪಣ್ಣ ಬಾಗಲವಾಡ, ಮಹಾಂತೇಶಸ್ವಾಮಿ ರೌಡೂರು, ಇತರರು ಇದ್ದರು.

ಅಸಮಧಾನ: ಮಾನ್ವಿ ಪುರಸಭೆ ಅಧ್ಯಕ್ಷೆ ಸ್ಥಾನಕ್ಕೆ ರಶೀದಾಬೇಗಂ ಹೆಸರು ಮುಂಚೂಣಿಯಲ್ಲಿತ್ತು. ನಾಮಪತ್ರ ಸಲ್ಲಿಸುವ ವೇಳೆಗೆ ಅಧ್ಯಕ್ಷೆ ಸ್ಥಾನಕ್ಕೆ ಸುಫಿಯಾಬೇಗಂ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಸಂತೋಷಿ ಜಯಪ್ರಕಾಶ, ಮೀನಾಕ್ಷಿ ಡಿ.ರಾಮಕೃಷ್ಣ, ಬಸವರಾಜ ಭಜಂತ್ರಿ ಆಕಾಂಕ್ಷಿಗಳಿದ್ದರು. ಆದರೆ, ಸಮಾಜವಾದಿ ಪಕ್ಷದ ಶುಕಮುನಿವರ ಹೆಸರು ಅಂತಿಮಗೊಳಿಸಿದ್ದರಿಂದ ಕಾಂಗ್ರೆಸ್ ಸದಸ್ಯರಲ್ಲಿ ಅಸಮಾಧಾನದ ಮೂಡಿದೆ.