ಮಾನ್ವಿ: ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದು, ಬೆಳೆ, ರಸ್ತೆ, ಸೇತುವೆಗೆ ಹಾನಿಯಾಗಿದೆ. ಇದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ತಾಲೂಕಿನ ಚೀಕಲಪರ್ವಿ, ಯಡಿವಾಳ, ಜಾಗೀರಪನ್ನೂರು, ನಲಗಮದಿನ್ನಿ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಹಾನಿ ಪರಿಶೀಲನೆ ಮಾಡಿದರು. ಹತ್ತಿ, ಮೆಣಸಿನಕಾಯಿ, ತೊಗರಿ, ಸೂರ್ಯಕಾಂತಿ ಹಾಗೂ ಇತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಕೃಷಿ ಪಂಪ್ ಸೆಟ್‌ಗಳು ನೀರಿನಲ್ಲಿ ಮುಳುಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿದರು.
ನದಿ ದಡದಲ್ಲಿರುವ ಗ್ರಾಮಗಳ ಜನರು ನದಿ ಕಡೆಗೆ ಹೋಗಬಾರದು. ಶಾಲೆ ಆವರಣಗಳಲ್ಲಿ ನೀರು ನಿಂತಿದ್ದು, ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ತೊಂದರೆಯಾಗಿದೆ. ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಸಮಸ್ಯೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಬೆಳೆ ಹಾನಿ ಬಗ್ಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ಕೃಷಿ ಅಧಿಕಾರಿ ಸೈಯದ್ ಹುಸೇನ್ ಸಾಬ್, ಮದ್ಲಾಪೂರ ಗ್ರಾಪಂ ಅಧ್ಯಕ್ಷ ವೆಂಕಟೇಶ ನಾಯಕ, ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಪ್ರಮುಖರಾದ ಖಲೀಲ್ ಖುರೇಷಿ, ಶಕೀಲ್ ಬೇಗ್, ಶರಣಪ್ಪಗೌಡ ಮದ್ಲಾಪೂರ, ಅಮರೇಗೌಡ ಬುದ್ದಿನ್ನಿ, ಲಕ್ಷ್ಮಣಯಾದವ ರಬ್ಬಣಕಲ್, ಹನುಮಪ್ಪ ನಾಯಕ, ಪಿ.ರವಿಕುಮಾರ್, ಗೋಪಾಲನಾಯಕ ಹರವಿ, ವಿರೂಪಾಕ್ಷಯ್ಯಸ್ವಾಮಿ, ಮೌಲಪ್ಪ ನಾಯಕ ಇತರರು ಇದ್ದರು.