ಮಾನ್ವಿ: ಸಂಘದ ಪದಾಧಿಕಾರಿಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಶ್ನಿಸಿದ್ದಕ್ಕೆ ಅನುಚಿತವಾಗಿ ವರ್ತಿಸಿದ ಸಚಿವ ಎನ್.ಎಸ್.ಬೋಸರಾಜು ರಾಜೀನಾಮೆ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಶೋಕ ನೀಲಗಲ್ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-61 ಅಭಿವೃದ್ಧಿಪಡಿಸಲು ಸರ್ಕಾರದಿಂದ 2.85 ಕೋಟಿ ರೂ. ವೆಚ್ಚದ ಕಾಮಗಾರಿ ರೂಪಿಸಲಾಗಿದೆ.
ಬಸವೇಶ್ವರ ವೃತ್ತದಿಂದ ನಾಗಡದಿನ್ನಿ ವೃತ್ತದವರೆಗೆ ರಸ್ತೆ ಮಧ್ಯಭಾಗದಿಂದ ಎರಡು ಬದಿ 15 ಮೀ. ವಿಸ್ತರಣೆ ಮಾಡುವ ಕುರಿತು ಕೆಕೆಆರ್‌ಡಿಬಿ ಕಲಬುರಗಿ ಯೋಜನೆಯ ಅಧಿಕಾರಿಯು ಸಿರವಾರ ಪಪಂ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ಹೀಗಿದ್ದರೂ ಗುತ್ತಿಗೆದಾರ ನಿಯಮಬಾಹಿರವಾಗಿ 35 ಅಡಿಗಳಿಗೆ ರಸ್ತೆ ಕಾಮಗಾರಿ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಸಚಿವರ ಗಮನಕ್ಕೆ ತಂದಾಗ ಅವರು ಅನುಚಿತವಾಗಿ ವರ್ತಿಸಿದ್ದು, ಸರಿಯಲ್ಲ. ಹೀಗಾಗಿ ಸಚಿವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಚಿಟ್ಟಿಬಾಬು, ರಮೇಶ ಪಾಟೀಲ್, ಬಿ.ಎನ್.ಯರಿದಾಳ್, ಹುಲಿಗೆಪ್ಪ ಸಿರವಾರ, ನಾಗರಾಜ, ಹನುಮಂತ, ಶಿವರಾಜ ದೊಡ್ಡಿ, ಮಲ್ಲೇಶ ಮದ್ಲಾಪುರ, ಚಿಕ್ಕಯ್ಯ ಕುರ್ಡಿ, ಕಳರಾಯ ಸುಂಕೇಶ್ವರ ಇತರರಿದ್ದರು.