ಮಾನ್ವಿ: ಸಂವಿಧಾನದಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ಗಳನ್ನು ನೀಡಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಿವರಾಜ ವಿ.ಸಿದ್ದೇಶ್ವರ ತಿಳಿಸಿದರು.
ಪಟ್ಟಣದ ಬಾಷುಮಿಯ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕುವಕೀಲರ ಸಂಘದ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಮಹಿಳೆಯರು ಕಾನೂನಿನ ನೆರವು ಪಡೆಯಬಹುದು. ತವರು ಮತ್ತು ಗಂಡನ ಮನೆಯಲ್ಲಿನ ಹಕ್ಕುಗಳನ್ನು ಪಡೆಯುವುದಕ್ಕೆ ಹಿಂದು ಉತ್ತರದಾಯಿತ್ವ ಕಾಯ್ದೆ 1956ರಲ್ಲಿ ಅವಕಾಶ ನೀಡಲಾಗಿದೆ. ನಾಲ್ಕು ತಲೆಮಾರುಗಳ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಹಕ್ಕು ಪಡೆಯುವುದಕ್ಕೆ ಅವಕಾಶವಿದೆ. ರಾಷ್ಟ್ರೀಯ ಸೇವೆಗಳ ದಿನವನ್ನು 1987ರಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಕಾನೂನು ಜಾರಿಗೆ ಬಂದ ದಿನವನ್ನಾಗಿ ಆಚರಿಸಲಾಗುತ್ತಿದೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಜನಸಾಮಾನ್ಯರಿಗೆ ಕಾನೂನಿನ ನೆರವನ್ನು ನೀಡುತ್ತಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚನ್ನಬಸವ ನಾಯಕ ಬಲ್ಲಟಗಿ, ಉಪಾಧ್ಯಕ್ಷ ಮನೋಹರ ವಿಶ್ವಕರ್ಮ, ಪ್ರಾಚಾರ್ಯ ಡಾ.ಜೆ.ಎಲ್.ಈರಣ್ಣ, ಉಪನ್ಯಾಸಕ ಶರಣಬಸವ ಬೆಟ್ಟದೂರು, ವಕೀಲರಾದ ಗುಮ್ಮ ಬಸವರಾಜ, ಹನುಮಂತ ಬ್ಯಾಗವಾಟ್, ದತ್ತಾತ್ರೇಯ, ಈಶಪ್ಪ ಬೈಲ್ ಮರ್ಚೆಡ್, ಮಲ್ಲೇಶ ಮಾಚನೂರು, ಯಲ್ಲಪ್ಪ ಬಾದರದಿನ್ನಿ ಇತರರಿದ್ದರು.