ಜಿಲ್ಲೆ

26ಕ್ಕೆ ಲಾಳಗೊಂಡ ಜಿಲ್ಲಾ ಸಮಾವೇಶ

ಕುರುವತ್ತಿ ಶ್ರೀಕಾಂತಪ್ಪ

ಮಾನ್ವಿ: ಲಾಳಗೊಂಡ ಸಮುದಾಯವನ್ನು ಜಾತಿ ಪಟ್ಟಿಗೆ ಸೇರಿಸುವಂತೆ ಜಿಲ್ಲಾ ಸಮಾವೇಶ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಲಾಳಗೊಂಡ ಸಮಾಜದ ಜಿಲ್ಲಾಧ್ಯಕ್ಷ ವೀರಭದ್ರಪ್ಪಗೌಡ ಅಲ್ದಾಳ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮಾನ್ವಿಯ ಟಿಎಪಿಸಿಎಂಎಸ್ ಆವರಣದಲ್ಲಿ ಫೆ.26 ರಂದು ಜಿಲ್ಲಾ ಲಾಳಗೊಂಡ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಾತಿ ಪಟ್ಟಿಗೆ ಸೇರ್ಪಡೆ ಕುರಿತು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಚುನಾವಣೆ ಘೋಷಣೆ ಒಳಗೆ ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಸಮುದಾಯದ ತಾಲೂಕು ಅಧ್ಯಕ್ಷ ಮಹಾದೇವಪ್ಪ ಮಾತನಾಡಿ, ಸಮಾವೇಶಕ್ಕೆ ಮಿಟ್ಟೇಮಲ್ಕಾಪುರು ಶಾಂತಾಶ್ರಮದ ಹಾಗೂ ಲಾಳಗೊಂಡ ಸಮಾಜದ ಗುರುಗಳಾದ ನಿಜಾನಂದ ಸ್ವಾಮೀಜಿ, ವಿವಿಧ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಮಾಜಿ ಸಚಿವ ಹಾಗೂ ಶಾಸಕ ಎಂ.ಬಿ. ಪಾಟೀಲ್, ಶಾಸಕ ಈಶ್ವರ ಕಂಡ್ರೆ, ವೀರಶೈವ-ಲಿಂಗಾಯತ ಮುಖಂಡ ಶಂಕರ ಬಿದರಿ, ಶಾಸಕ ರಾಜಾ ವೆಂಕಟಪ್ಪನಾಯಕ, ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಎನ್.ಎಸ್. ಬೋಸರಾಜು, ಹಾಗೂ ಜಿಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ಸಮಾಜದ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಚನ್ನಬಸವ ಬೆಟ್ಟದೂರು, ಮುಖಂಡರಾದ ವೀರಭದ್ರಗೌಡ ಭೋಗಾವತಿ, ಡಿ. ಮಲ್ಲಿಕಾರ್ಜುನ, ಅಮರೇಶ ಗವಿಗಟ್ಟು, ಗುಂಡಪ್ಪಗೌಡ ಕಲ್ಲೂರು, ಅಮರೇಶ ಪಾಟೀಲ್ ಹರನಹಳ್ಳಿ, ಚಂದ್ರಶೇಖರಗೌಡ ಮೇಟಿ ಜಾನೇಕಲ್ ಇತರರಿದ್ದರು.