ಮಾನ್ವಿ: ನೆಲ, ಜಲ, ಭಾಷೆಯ ಏಳಿಗೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುವುದಾಗಿ ಪುರಸಭೆ ವಿಪಕ್ಷ ನಾಯಕ ರಾಜಾ ಮಹೇಂದ್ರ ನಾಯಕ ಹೇಳಿದರು.
ಪಟ್ಟಣದ ಕಸಾಪ ಕಚೇರಿಯಲ್ಲಿ ವಿಶ್ವ ಮಾನವ ದಿನಾಚರಣೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರ ತಂದುಕೊಟ್ಟ ಕುವೆಂಪು ಅವರ ಸಾಹಿತ್ಯ ಯುವ ಸಾಹಿತಿಗಳಿಗೆ ಸ್ಫೂರ್ತಿಯಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯ ಅಧ್ಯಯನಕ್ಕಾಗಿ ತಾಲೂಕಿನ ಕುವೆಂಪು ಪ್ರತಿಷ್ಠಾನಕ್ಕೆ ವೈಯಕ್ತಿಕವಾಗಿ 50 ಸಾವಿರ ರೂ., ಕಸಾಪ ತಾಲೂಕು ಘಟಕದಿಂದ ನಡೆಯುವ ದತ್ತಿ ಉಪನ್ಯಾಸಕ್ಕೆ ನಮ್ಮ ತಾಯಿ ರಾಣಿ ರಂಗಮ್ಮ ಅವರ ಹೆಸರಿನಲ್ಲಿ ದತ್ತಿ ದಾನ ನೀಡಲಾಗುವುದು. ನನ್ನ ವಾರ್ಡ್ ವ್ಯಾಪ್ತಿಯಲ್ಲಿ ಕಸಾಪ ಭವನದ ಅಭಿವೃದ್ಧಿಗಾಗಿ ಪುರಸಭೆಯ ಅನುದಾನದಲ್ಲಿ 4 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ 1 ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ರವಿಕುಮಾರ್ ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಸಾಹಿತಿಗಳ ಕೊಡುಗೆ ದೊಡ್ಡದಿದೆ. ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಪಟ್ಟಣದಲ್ಲಿ ಶಾಶ್ವತವಾದ ಕನ್ನಡ ಭವನ ನಿರ್ಮಾಣದ ಅಗತ್ಯವಿದೆ. ಈ ಕುರಿತು ಶಾಸಕ ರಾಜಾ ವೆಂಕಟಪ್ಪನಾಯಕಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.