ಮಾನ್ವಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಜೆಡಿಎಸ್ ತಾಲೂಕು ಘಟಕ ಮನವಿ ಸಲ್ಲಿಸಿತು. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಾಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಸಿರವಾರ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಬಲ್ಲಟಗಿ, ರಾಜಾ ಮಹೇಂದ್ರನಾಯಕ ಇತರರಿದ್ದರು.  
ಜಿಲ್ಲೆ

ಎಸ್ಸಿಪಿ-ಟಿಎಸ್ಪಿ ಅನುದಾನ ಗ್ಯಾರಂಟಿಗೆ ಬಳಸದಿರಿ

ಮಾನ್ವಿ: ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ-ಟಿಎಸ್ಪಿ ಅನುದಾನ ಬಳಕೆ ಖಂಡಿಸಿ ಜೆಡಿಎಸ್ ತಾಲೂಕು ಘಟಕ ಸೋಮವಾರ ಪಟ್ಟಣದ ಬಸವ ವೃತ್ತದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಎಸ್ಸಿಪಿ-ಟಿಎಸ್ಪಿ ಯೋಜನೆಗಳ ಮೀಸಲು ಅನುದಾನ ವನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅನ್ಯಯೋಜನೆಗಳಿಗೆ ಬಳಸಬಾರದು. 2023-24ನೇ ಸಾಲಿನಲ್ಲಿ 11 ಸಾವಿರ ಕೋಟಿ ರೂ. ಹಾಗೂ 2024-25ನೇ ಸಾಲಿನಲ್ಲಿ 14 ಸಾವಿರ ಕೋಟಿ ರೂ. ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ತಿಳಿಸಿದರು.

ಪಂಚ ಗ್ಯಾರಂಟಿ ಯೋಜನೆಗಳಿಂದ ಸಾರ್ವಜನಿಕರಿಗೆ ಸದ್ಬಳಕೆಗಿಂತ ತೊಂದರೆಯೇ ಹೆಚ್ಚಾಗಿದೆ. ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಅನ್ನಭಾಗ್ಯದ ಅಕ್ಕಿ ಕಾಳ ಸಂತೆಯಲ್ಲಿ ಮರಾಟವಾಗುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಕಾರಣ. ಗೃಹಜ್ಯೋತಿ ಯೋಜನೆಯ ನೋಂದಾಯಿತ ಕುಟುಂಬಗಳ ಉಚಿತ ವಿದ್ಯುತ್ ಬಿಲ್ಲನ್ನು ಸಂಬಂಧಿಸಿದ ವಿತರಣಾ ಕಂಪನಿಗಳಿಗೆ ಇದುವರೆಗೂ ಮರುಪಾವತಿಸಿಲ್ಲ. ಇದರಿಂದ ಉಳಿದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ ಎಂದರು.

ಪ್ರಮುಖರಾದ ಲೋಕರಡ್ಡಿ, ನಾಗರಾಜ ಭೋಗಾವತಿ, ಪಿ.ರವಿಕುಮಾರ, ಎಚ್.ಮೌನೇಶಗೌಡ, ದೇವರಾಜ್, ಸುಭಾನ್‌ಬೇಗ್, ಬಸವರಾಜ ಭಜಂತ್ರಿ, ವೀರೇಶ ಉಪ್ಪಾರ, ಶರಣಪ್ಪಗೌಡ ಮದ್ಲಾಪುರ, ಪ್ರಕಾಶ, ಶರಣಪ್ಪ ಮೇದಾ, ಬಾಷಾಸಾಬ್ ಇಬ್ರಾಹಿಂ ಖುರೇಷಿ ಇತರರಿದ್ದರು.