ಜಿಲ್ಲೆ

ಮಾನ್ವಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 80 ಕ್ವಿಂಟಾಲ್ ಪಡಿತರ ಅಕ್ಕಿ ವಶ, ಲಾರಿ ಬಿಟ್ಟು ಪರಾರಿಯಾದ ಚಾಲಕ

ರಾಯಚೂರು: ಮಾನ್ವಿ ತಾಲೂಕಿನ ಕಪಗಲ್‌ನಿಂದ ರಾಯಚೂರಿಗೆ ಅಕ್ರಮವಾಗಿ ಮಿನಿ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಅಂದಾಜು 80 ಕ್ವಿಂಟಾಲ್ ಅಕ್ಕಿಯನ್ನು ನಗರದ ಸಾಥ್‌ಮೈಲ್ ಕ್ರಾಸ್ ಬಳಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬುಧವಾರ ವಶಪಡಿಸಿಕೊಂಡಿದ್ದಾರೆ.

ಪಡಿತರ ಅಕ್ಕಿ ಅಕ್ರಮ ಸಾಗಣೆ ಬಗ್ಗೆ ಸಹಾಯಕ ಆಯುಕ್ತ ಸಂತೋಷ ಕಾಮಗೌಡಗೆ ದೂರು ಬಂದ ಹಿನ್ನೆಲೆ ಅವರು ಅಧಿಕಾರಿಗಳಿಗೆ ಪರಿಶೀಲನೆಗೆ ಸೂಚನೆ ನೀಡಿದ್ದರು. ಆಹಾರ ಮತ್ತು ನಾಗರಿಕ ಇಲಾಖೆ ಸಹಾಯಕ ನಿರ್ದೇಶಕ ಅರುಣಕುಮಾರ ನೇತೃತ್ವದ ತಂಡ ಸಾಥ್‌ಮೈಲ್ ಕ್ರಾಸ್ ಬಳಿ ತಪಾಸಣೆ ನಡೆಸಿದಾಗ ಅಕ್ರಮ ಅಕ್ಕಿ ಸಾಗಣೆ ಪ್ರಕರಣ ಪತ್ತೆಯಾಗಿದೆ.

ಅಧಿಕಾರಿಗಳಿಗೆ ಬೆದರಿ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಅಕ್ಕಿಯನ್ನು ಎಲ್ಲಿಗೆ ಸಾಗಣೆ ಮಾಡಲಾಗುತ್ತಿತ್ತು ಮತ್ತು ಯಾರೂ ಸಾಗಣೆ ಮಾಡುತ್ತಿದ್ದರೂ ಎನ್ನುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಚೀಲಗಳನ್ನು ಬದಲಾಯಿಸಿ ಧಾನ್ಯವನ್ನು ರಾಯಚೂರಿನ ಅಕ್ಕಿಗಿರಣಿ ತರಲಾಗುತ್ತಿತ್ತು ಎನ್ನುವ ಮಾತುಗಳು ಕೇಳಬರುತ್ತಿವೆ.