ಮಾನ್ವಿಯ ಬಾಷುಮಿಯ ಸಾಹುಕಾರ್ ಸರ್ಕಾರಿ ಪದವಿ ಕಾಲೇಜ್ ಅವರಣದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ಮೇಳವನ್ನು ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿದರು. ಶಾಸಕ ಹಂಪಯ್ಯನಾಯಕ, ಸಂಸದ ಜಿ.ಕುಮಾರ ನಾಯಕ, ಶಾಸಕ ಜಿ.ಹಂಪಯ್ಯ ನಾಯಕ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ, ಆರೋಗ್ಯ ಇಲಾಖೆಯ ಆಯುಕ್ತ ಕೆ.ಬಿ. ಶಿವುಕುಮಾರ್, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ ಇತರರಿದ್ದರು. 
ಜಿಲ್ಲೆ

ಬಾಣಂತಿಯರ ಚಿಕಿತ್ಸೆಗೆ 360 ಕೋಟಿ ರೂ. ಅನುದಾನ > ಸಚಿವ ದಿನೇಶ ಆರ್. ಗುಂಡೂರಾವ್ ಮಾಹಿತಿ > ಮಾನ್ವಿಯಲ್ಲಿ ಬೃಹತ್ ಆರೋಗ್ಯ ಮೇಳ

ಮಾನ್ವಿ: ರಾಜ್ಯದಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಶೂನ್ಯಕ್ಕಿಳಿಸಲು ಅಗತ್ಯ ಚಿಕಿತ್ಸೆಗಾಗಿ ಸರ್ಕಾರ 360 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದು ಆರೋಗ್ಯ ಸಚಿವ ದಿನೇಶ ಆರ್.ಗುಂಡೂರಾವ್ ಹೇಳಿದರು.

ಪಟ್ಟಣದ ಬಾಷುಮಿಯ ಸಾಹುಕಾರ ಸರ್ಕಾರಿ ಪದವಿ ಕಾಲೇಜ್ ಅವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಮೇಳದಲ್ಲಿ ವಿವಿಧ ತಪಾಸಣಾ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ನಿವಾರಣೆಗೆ ಕೇಂದ್ರ ಸರ್ಕಾರ ವ್ಯಾಕ್ಸಿನ್ ನೀಡಲು ಮುಂದಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಕಲ್ಯಾಣ ಕರ್ನಾಟಕದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ವ್ಯಾಕ್ಸಿನ್ ನೀಡಲು ಮುಂದಾಗಿದೆ. ಇದರಿಂದ ಮಹಿಳೆಯರಲ್ಲಿ ಕ್ಯಾನ್ಸರ್ ನಿಯಂತ್ರಿಸಬಹುದಾಗಿದೆ. ರಾಜ್ಯದಲ್ಲಿ 20.81 ಲಕ್ಷ ಜನರಿಗೆ ಕಣ್ಣಿನ ತಪಾಸಣೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿ ಉಚಿತ ಕನ್ನಡ ವಿತರಿಸಲಾಗಿದೆ. ಆರೋಗ್ಯ ಮೇಳಗಳಿಂದ ಜನರಲ್ಲಿನ ರೋಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿ ಸೇರಿ ಇತರೆ ಕಾಯಿಲೆಗಳನ್ನು ಪರೀಕ್ಷಿದಾಗ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಶಾಸಕ ಹಂಪಯ್ಯನಾಯಕ ಮಾತನಾಡಿ, ಹಿಂದುಳಿದ ಜಿಲ್ಲೆಯಲ್ಲಿ ಆರೋಗ್ಯ ಮೇಳ ಆಯೋಜಿಸುವುದರಿಂದ ಬಡವರಿಗೆ ಉಪಯೋಗವಾಗಲಿದೆ. ರಾಜ್ಯ ಸರ್ಕಾರ ಈ ಭಾಗದಲ್ಲಿ ಆರೋಗ್ಯ ಮೇಳ ನಡೆಸಲು ಸಹಕರಿಸಿದೆ ಎಂದು ಹೇಳಿದರು.

ಸಂಸದ ಜಿ.ಕುಮಾರ ನಾಯಕ ಮಾತನಾಡಿದರು. ಶಾಸಕ ಜಿ.ಹಂಪಯ್ಯ ನಾಯಕ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ, ಆರೋಗ್ಯ ಇಲಾಖೆಯ ಆಯುಕ್ತ ಕೆ.ಬಿ. ಶಿವುಕುಮಾರ್, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಸಹಾಯಕ ಆಯುಕ್ತ ಗಜಾನನ ಬಾಳೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ, ಡಾ. ಚಂದ್ರಶೇಖರಯ್ಯಸ್ವಾಮಿ, ತಾಲೂಕು ವೈದ್ಯಾಧಿಕಾರಿ ಶರಣಬಸವ ಪಾಟೀಲ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.