ಜಿಲ್ಲೆ

ಮಾನ್ವಿಯಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು

ಪ್ರವೀಣ ಉದುಸಾ ದಲಬಂಜನ್

ಮಾನ್ವಿ: ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಹಿಂದು-ಮುಸ್ಲಿಂ ಸಮುದಾಯದವರು ಶಾಂತಿ ಸೌಹಾರ್ದದಿಂದ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಗಣೇಶ ಹಬ್ಬ ಹಾಗೂ ಈದ್‌ಮಿಲಾದ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಶಾಂತಿಸಭೆಯಲ್ಲಿ ಮಾತನಾಡಿದರು. ಪೊಲೀಸ್ ಇಲಾಖೆಯಿಂದ 28 ನಿಯಮಗಳನ್ನು ರೂಪಿಸಲಾಗಿದೆ. ಗಣೇಶ ಮಂಡಳಿಯವರು ಕಡ್ಡಾಯವಾಗಿ ಪಾಲಿಸಬೇಕು. ಪ್ರಕೃತಿಗೆ ಪೂರಕವಾದ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಪಿಒಪಿ ಮೂರ್ತಿಗಳನ್ನು ಬಳಸಬೇಡಿ ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗುವುದು. ಹಬ್ಬದಲ್ಲಿ ಡ್ರೋನ್ ಕಾಣ್ಗಾವಲು ಇರಲಿದೆ. ಮೆರವಣಿಗೆ ಸಮಯದಲ್ಲಿ ಪ್ರಚೋದನಾಕಾರಿ ಭಿತ್ತಿ ಪತ್ರ ಪ್ರದರ್ಶನ, ಮಾರಕ ಆಯುಧಗಳನ್ನು ಬಳಸುವಂತಿಲ್ಲ. ಡಿ.ಜೆ. ನಿಷೇಧಿಸಲಾಗಿದೆ. ಸೆ.5 ರಂದು ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ತಿಳಿಸಿದರು.

ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ಸಿಂಧನೂರು ಗ್ರಾಮೀಣ ಡಿವೈಎಸ್‌ಪಿ ಬಿ.ಎಸ್. ತಳವಾರ್, ಪಿ.ಐ. ಸೋಮಶೇಖರ ಕೆಂಚರೆಡ್ಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ತಾಪಂ ಇಒ ದೀಪಾ, ಜೆಸ್ಕಾಂ ಇಲಾಖೆಯ ಜೆ.ಇ. ಬಸವಲಿಂಗಪ್ಪ, ಹಿರಿಯ ನ್ಯಾಯಾವಾದಿಗಳಾದ ಎ.ಬಿ. ಉಪಳಮಠ, ಗುಮ್ಮಬಸವರಾಜ, ಪುರಸಭೆ ಸದಸ್ಯರಾದ ರಾಜಾ ಮಹೇಂದ್ರನಾಯಕ, ರೇವಣಸಿದ್ದಯ್ಯಸ್ವಾಮಿ, ಬಾಷಸಾಬ್, ಮುಖಂಡರಾದ ಕೆ.ಬಸವಂತಪ್ಪ, ರಾಜಾ ಸುಭಾಷಚಂದ್ರ ನಾಯಕ, ರೆಹಮತ್ ತಾಲೂಕಿನ ಗಣೇಶ ಮಂಡಳಿಗಳ ಪದಾಧಿಕಾರಿಗಳು, ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರು ಇದ್ದರು.