ಮಾನ್ವಿ: ಈ ಭಾಗದಲ್ಲಿ ಏಳು ಸಮುದಾಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು 880 ಕೋಟಿ ರೂ. ಅನುದಾನ ನೀಡಲಾಗಿದೆ. ಮೊದಲ ಹಂತದಲ್ಲಿ 450 ಕೋಟಿ ರೂ. ಬಿಡುಗಡೆಯಾಗಿ ಕಾಮಗಾರಿಗಳು ಆರಂಭವಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದಷ್ಟು ಶೀಘ್ರದಲ್ಲಿ ಎರಡನೇ ಹಂತದ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದರು.
11 ತಾಲೂಕುಗಳಿಗೆ ಸಮುದಾಯ ಆರೋಗ್ಯ ಕೇಂದ್ರ ಮಾಡಲಾಗುತ್ತದೆ. 900 ಫಾರ್ಮಾಸಿಸ್ಟ್ ಬೇಕಿದ್ದು, ಪ್ರಾಥಮಿಕ ಪಟ್ಟಿ ಪ್ರಕಟಿಸಲಾಗಿದೆ. ಮೂರು ತಿಂಗಳಲ್ಲಿ 1600 ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಕಿದ್ವಾಯಿ ಆಸ್ಪತ್ರೆ ನಿರ್ಮಾಣಕ್ಕೆ 52 ಕೋಟಿ ರೂ. ನೀಡಲಾಗುತ್ತದೆ. ರಾಯಚೂರು ಜಿಲ್ಲೆಯಲ್ಲಿ ಬಿಸಿಲು ಹೆಚ್ಚಳ ಹಿನ್ನೆಲೆ ಸರ್ಕಾರಿ ನೌಕರರ ಕರ್ತವ್ಯದ ಸಮಯ ಬದಲಾವಣೆ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು. ನೌಕರರು ಮಧ್ಯಾಹ್ನದ ಬದಲು ಬೆಳಗ್ಗೆ ಅಥವಾ ಸಾಯಂಕಾಲ ಕ್ಷೇತ್ರ ಭೇಟಿ ಮಾಡಬೇಕು. ರಜೆಗಿಂತ ಸಮಯ ಬದಲಿಸಿಕೊಂಡರೆ ಒಳ್ಳೆಯದು ಎಂದರು.
ಸಚಿವ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕ ಹಂಪಯ್ಯ ಸಾಹುಕಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್‌ಸಾಬ್, ಮುಖಂಡ ಮಹ್ಮದ್ ಶಾಲಂ ಇನ್ನಿತರರಿದ್ದರು.