ಮಾನ್ವಿ: ಪಠ್ಯೇತರ ಚಟುವಟಿಕೆಗಳ ಜತೆಗೆ ವಿದ್ಯಾರ್ಥಿಗಳ ಬೌದ್ಧಿಕಮಟ್ಟ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ಸಹಕಾರಿಯಾಗಲಿವೆ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ವಸ್ತುಪ್ರದರ್ಶನ ಭಾಗಿಯಾದಾಗ ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ ಎಂದರು. ಅರಣ್ಯಾಧಿಕಾರಿ ರಾಜೇಶ್ ನಾಯಕ ಮಾತನಾಡಿ, ಮಕ್ಕಳು ಟಿವಿ, ಮೊಬೈಲ್‌ಗಳಿಗೆ ಅಂಟಿಕೊಳ್ಳದೆ ಪರಿಸರದ ಜತೆ ಬೆರೆಯಬೇಕು. ಪರಿಸರ, ಪ್ರಾಣಿ, ಪಕ್ಷಿ ಸಂಕುಲ ರಕ್ಷಣೆ ಮುಂದಾಗಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಮನೆಯ ಮೇಲೆ ಪ್ರಾಣಿ, ಪಕ್ಷಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ವಿಜ್ಞಾನದೊಂದಿಗೆ ಪರಿಸರ ಕಾಳಜಿ, ಇತಿಹಾಸ, ಸಂಸ್ಕೃತಿ, ಕರಕುಶಲತೆ, ಕೌಶಲ, ಕೃಷಿ, ಗ್ರಾಮೀಣ ಸೊಗಡು ಬಿಂಬಿಸುವ ಮಾದರಿಗಳನ್ನು ಪ್ರದರ್ಶಿಸಲಾಯಿತು. ಸಂಸ್ಥೆ ಅಧ್ಯಕ್ಷ ಕೆ.ಈ.ನರಸಿಂಹ, ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ, ವ್ಯಂಗಚಿತ್ರಕಾರ ಈರಣ್ಣ ಬೆಂಗಾಲಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಶರ್ಫುದ್ದೀನ್ ಪೋತ್ನಾಳ, ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಪ್ರಮುಖರಾದ ಶ್ರೀನಿವಾಸರಾವ್, ಬಿ.ವಿ.ರಡ್ಡಿ, ಡಿ.ವಿ.ಪ್ರಕಾಶ್, ಪ್ರಭಯ್ಯಸ್ವಾಮಿ, ಸುಭಾಷ್ ನಾಯಕ, ಮಂಜುನಾಥ ಕಮತರ, ಲಕ್ಷ್ಮಣ ಜಾನೇಕಲ್, ರಾಜು ತಾಳಿಕೋಟೆ ಇದ್ದರು.