ಜಿಲ್ಲೆ

ನಗರದಲ್ಲಿ ಮನುಸ್ಮತಿ ದಹಿಸಿ ಪ್ರತಿಭಟನೆ: ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಅಸ್ಪೃಶ್ಯತೆ, ಜಾತೀಯತೆ, ಲಿಂಗ ತಾರತಮ್ಯ, ಅಸಮಾನತೆ, ಮನುಸ್ಮತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸುಟ್ಟ ಐತಿಹಾಸಿಕ ದಿನದಂದು ವಿವಿಧ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ‘ಮನುಸ್ಮತಿ’ ದಹಿಸಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ, ಜಾಗೃತ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ‘ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ ಮನುಸ್ಮತಿಗೆ ಕೊಳ್ಳಿ ಇಟ್ಟು ಸಮತೆಯ ಜ್ಯೋತಿ ಬೆಳಗಿಸೋಣ’ ಎಂಬ ಘೋಷಣೆ ಕೂಗಲಾಯಿತು. ಅಂತೆಯೇ ಸಂವಿಧಾನದ ಆಶಯ ಸಂಪೂರ್ಣವಾಗಿ ಅನುಷ್ಠಾನವಾಗಬೇಕೆಂದು ಒತ್ತಾಯಿಸಿದರು.

ಮನುಸ್ಮತಿ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿತು. ಇದನ್ನು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸುಟ್ಟುಹಾಕಿ 97 ವರ್ಷವಾಗಿದೆ. ಜಾತಿ ಅಸಮಾನತೆ, ಲಿಂಗ ತಾರತಮ್ಯ ದಲಿತರು, ಮಹಿಳೆಯರ ಮೇಲಿನ ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ ಸತಿಸಹಗಮನ ಪದ್ಧತಿ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿ ಶತಮಾನಗಳ ಕಾಲ ಮುಂದುವರಿಯಲು ಕಾರಣವಾದ ಮನುಸ್ಮತಿಯನ್ನು ಡಾ.ಅಂಬೇಡ್ಕರ್ ಅವರು 1927ರ ಡಿ.25ರಂದು ಸಾರ್ವಜನಿಕವಾಗಿ ಸುಟ್ಟು ಹಾಕಿ ಮನುವಾದದ ವಿರುದ್ಧ ಎಚ್ಚರಿಕೆ ನೀಡಿದರು ಎಂದು ವಿವರಿಸಿದರು.

ಅಂಬೇಡ್ಕರ್ ಅವರು ಸಮ ಸಮಾಜದ ನಿರ್ಮಾಣದ ಕನಸು ಹೊತ್ತು ಸಮಾನತೆ, ಸಹೋದರತೆ, ಭ್ರಾತೃತ್ವದ ಆಶಯದೊಂದಿಗೆ ಸಂವಿಧಾನ ರೂಪುಗೊಂಡಿದೆ. ಸಂವಿಧಾನ ರಚನೆಗೆ ಅವರ ಕೊಡುಗೆ ಅಪಾರವಾಗಿದೆ. ಆಂತರಿಕ ಮತ್ತು ಬಹಿರಂಗವಾಗಿ ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲೆ ಅಸಹಿಷ್ಣುತೆಯನ್ನು ಆರ್‌ಎಸ್‌ಎಸ್, ಬಿಜೆಪಿ, ಸಂಘಪರಿವಾರ ಹೊರಹಾಕುತ್ತಾ ಬಂದಿದೆ. ಮನುಸ್ಮತಿ ಪ್ರಣೀತ ಭಾರತವನ್ನು ಬದಿಗೆ ಸರಿಸಿ, ಸಮಾನತೆ ಸಾರಿದ ಬೌದ್ಧತತ್ವ ಪ್ರಣೀತ ಪ್ರಜಾತಾಂತ್ರಿಕ ಸಂವಿಧಾನವನ್ನು ಅಂಬೇಡ್ಕರ್ ಅವರು ದೇಶಕ್ಕೆ ರೂಪಿಸಿಕೊಟ್ಟಿದ್ದನ್ನು ಸಹಿಸಿಕೊಳ್ಳದ ಶಕ್ತಿಗಳು ಪ್ರಸ್ತುತ ಬಲವಾಗಿ ಜನರ ದಿಕ್ಕು ತಪ್ಪಿಸಿ, ಸುಳ್ಳು ಹಬ್ಬಿಸುವ ಕಾರ್ಯದಲ್ಲಿ ಸಕ್ರಿಯವಾಗಿವೆ ಎಂಬುದನ್ನ ಅರಿಯಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಮನುಸ್ಮತಿಯನ್ನು ಸುಟ್ಟಿದ್ದು ಚಾರಿತ್ರಿಕ ವಿದ್ಯಾಮಾನ. ಈ ಪ್ರಕ್ರಿಯೆಯನ್ನು ಪ್ರತಿಯೊಬ್ಬರು ಮುಂದುವರಿಸಬೇಕು. ಮನುಸ್ಮತಿ ಸುಟ್ಟ ದಿನ’ವನ್ನು ದೇಶದಾದ್ಯಂತ ಅಚರಣೆ ಮಾಡಿ ಮನುವಾದಕ್ಕೆ ಪ್ರತಿರೋಧಿಸಿಬೇಕು. ಅಂಬೇಡ್ಕರ್ ಅವರು ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಅನುಷ್ಠಾನಗೊಳ್ಳುವವರೆಗೂ ದೇಶದಲ್ಲಿ ಮನುಸ್ಮತಿ ದಹನದ ಪ್ರಕ್ರಿಯೆ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಸಿ.ಕುಮಾರಿ, ಸಿದ್ದರಾಜು, ಬಿ.ಎಸ್.ಶಿಲ್ಪಾ, ಎನ್.ನಾಗೇಶ್, ಎನ್.ಸುಬ್ರಹ್ಮಣ್ಯ, ಗುಡಿಗೇನಹಳ್ಳಿ ಚಂದ್ರಶೇಖರ್, ಹುರುಗಲವಾಡಿ ರಾಮಯ್ಯ, ಲಕ್ಷ್ಮಣ್ ಚೀರನಹಳ್ಳಿ, ಶಿವಲಿಂಗಯ್ಯ, ಗಂಜಾಂ ರವಿ, ವೈ.ರಾಜಶೇಖರ, ಪಾಂಡು, ಗಂಗಾಧರಯ್ಯ, ಬಿ.ಟಿ.ವಿಶ್ವನಾಥ್, ಹೊನ್ನಪ್ಪ, ಶ್ರೀನಿವಾಸ್, ಜಿ.ಸಂತೋಷ್ ಇತರರಿದ್ದರು.