ಮಂಡ್ಯ: ಗತಕಾಲದ ಜ್ಞಾನವನ್ನು ಪಡೆಯಬೇಕಾದರೆ ಸಾಧ್ಯವಾದಷ್ಟು ಹಳೆಯ ಪಠ್ಯಗಳನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ವಿದ್ವಾಂಸರನ್ನು ಸೃಷ್ಟಿ ಮಾಡಬೇಕು ಎಂದು ಹಿರಿಯ ವಿದ್ವಾಂಸ ಪ್ರೊ.ಒ.ಎಲ್.ನಾಗಭೂಷಣಸ್ವಾಮಿ ಹೇಳಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿ ಶಾಸ್ತ್ರ ವಿಭಾಗ, ಕರ್ನಾಟಕ ಸಂಘ, ಮದ್ದೂರು ಎಚ್.ಕೆ.ವೀರಣ್ಣಗೌಡ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನ ಅಖಿಲ ಕರ್ನಾಟಕ ಇಪ್ಪತ್ತನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಶನಿವಾರ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು. ಅಂದು ಕನ್ನಡಕ್ಕೆ ಬೇಕಾದ ಕೆಲಸ ಮಾಡುವ ಯುವಕರನ್ನು ಬೌದ್ಧಿಕವಾಗಿ ಸಿದ್ಧಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ ಈಗ ಕನ್ನಡದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದೇವಾ ಎನ್ನುವ ಸ್ಥಿತಿಗೆ ಬಂದು ತಲುಪಿದ್ದೇವೆ ಎಂದು ವಿಷಾದಿಸಿದರು.
ಕನ್ನಡಕ್ಕಾಗಿ ಕೆಲಸ ಮಾಡಿದರೆ ಅನ್ನ-ಕೆಲಸ ಸಿಗುತ್ತೆ ಎನ್ನುವ ಗ್ಯಾರಂಟಿ ಇಲ್ಲ. ಪರಿಸ್ಥಿತಿ ಹೀಗಿರುವಾಗ ಇನ್ನು ಗ್ರಂಥ ಸಂಪಾದನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಇಂತಹ ಪರಿಸ್ಥಿತಿಯ ನಡುವೆ ವರ್ಷಕ್ಕೊಮ್ಮೆ ಹಸ್ತಪ್ರತಿ ಸಮ್ಮೇಳನ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂತಹ ಸಮ್ಮೇಳನಗಳಿಂದಾದರೂ ಸ್ವಲ್ಪ ಮಟ್ಟಿಗೆ ಹಸ್ತಪ್ರತಿಯ ಬಗ್ಗೆ ತಿಳಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.
ಹಿಂದೆಲ್ಲ ಎಷ್ಟೋ ಪುಸ್ತಕಗಳು ಸಿಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ತಿನಂಶ್ರೀ ಸೇರಿದಂತೆ ಹಲವು ಅಧ್ಯಾಪಕರು ಕೈಯಲ್ಲಿ ಹಸ್ತಪ್ರತಿ ರೂಪದಲ್ಲಿ ಬರೆದುಕೊಂಡು ಬಂದು ಪಾಠ ಮಾಡುತ್ತಿದ್ದರು. ಆದರೆ ಇಂದು ಪುಸ್ತಗಳು ಸಿಗುತ್ತವೆ. ಇಲ್ಲವೇ ನಕಲು ಮಾಡಿಸಿಕೊಳ್ಳಬಹುದು ಎನ್ನುವ ಮಾನಸಿಕತೆಗೆ ಒಗ್ಗಿಹೋಗಿದ್ದೇವೆ. ಒಂದು ವೇಳೆ ಇಡೀ ಕಾವ್ಯ ಬರೆದುಕೊಳ್ಳುವುದಾದರೆ ಕಾವ್ಯ ಎಷ್ಟರ ಮಟ್ಟಿಗೆ ನಮ್ಮ ಮನಸ್ಸಿಗೆ ಹೋಗುತ್ತಿತ್ತು ಎಂಬುದು ಗಮನಾರ್ಹ. ಪುಸ್ತಕ ಸಿಕ್ಕರೆ ಓದಿಕೊಳ್ಳೋಣ ಎನ್ನುವ ಸ್ಥಿತಿಗೆ ಇಂದು ಬಂದು ನಿಂತಿದ್ದೇವೆ ಎಂದರು.
ಹಿರಿಯ ವಿದ್ವಾಂಸ ಡಾ.ರಾಮೇಗೌಡ(ರಾಗೌ) ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಉಪಾಧ್ಯಕ್ಷ ಪ್ರೊ. ಎಚ್.ಎಸ್.ಮುದ್ದೇಗೌಡ, ಎಚ್.ಎಲ್.ಮಹದೇವು ಇತರರಿದ್ದರು.