ಕೋಟ: ಕಳೆದ ವಾರ ಕರಾವಳಿಗೆ ಅಪ್ಪಳಿಸಿದ ತೌಕ್ತೆ ಚಂಡಮಾರುತದ ಪರಿಣಾಮ ಕೋಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಣೂರು ಪಡುಕರೆಯ ಫಿಶರ್‌ಮೆನ್ ರಸ್ತೆ ಸಮೀಪ ಕಡಲ್ಕೊರೆತ ಸಂಭವಿಸಿ ಭಾರಿ ಪ್ರಮಾಣದ ತ್ಯಾಜ್ಯವನ್ನು ಸಮುದ್ರದಿಂದ ಹೊರಹಾಕಿತ್ತು. ಈ ತ್ಯಾಜ್ಯವನ್ನು ಮಣೂರು ಪಡುಕರೆಯ ಕೃಷ್ಣ ಮೆಂಡನ್ ಶೈಲಜಾ ದಂಪತಿ ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.
ಅಂದಾಜು 3 ಎಕರೆಗೂ ಅಧಿಕ ಕೃಷಿಭೂಮಿಯಲ್ಲಿ ರಾಶಿ ಬಿದ್ದ ತ್ಯಾಜ್ಯವನ್ನು ದಂಪತಿ ಭಾನುವಾರ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಕೋವಿಡ್ ಸಂದರ್ಭ ತ್ಯಾಜ್ಯ ತೆರವಿಗೆ ಯಾರೂ ಮುಂದಾಗದಾಗ ಈ ದಂಪತಿ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕೃಷಿ ಭೂಮಿಗೆ ಹಾನಿ: ಇಲ್ಲಿನ 3 ಎಕರೆಗೂ ಅಧಿಕ ಕೃಷಿ ಭೂಮಿ ಕಡಲ ಅಬ್ಬರಕ್ಕೆ ನಲುಗಿ ಉಪ್ಪು ನೀರು ಆವರಿಸಿದೆ. ಇದರಿಂದ ಈ ಭೂಮಿಯಲ್ಲಿ ಕೃಷಿ ಕಾರ್ಯ ನಡೆಸಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.
ಚಂಡಮಾರುತ ಪರಿಣಾಮದಿಂದ ಭಾರಿ ಪ್ರಮಾಣದ ತ್ಯಾಜ್ಯ ನಮ್ಮ ಪರಿಸರವನ್ನು ಸೇರಿದೆ. ಇದನ್ನು ತೆರವುಗೊಳಿಸಲು ಯಾರು ಮನಸ್ಸು ಮಾಡದ ಹಿನ್ನೆಲೆಯಲ್ಲಿ ನಾವು ಸ್ವಚ್ಛಗೊಳಿಸುತ್ತಿದ್ದೇವೆ.
ಕೃಷ್ಣ ಮೆಂಡನ್, ಶೈಲಜಾ, ಕಡಲಕಿನಾರೆ ಸ್ವಚ್ಛಗೊಳಿಸಿದ ದಂಪತಿ