ಬೆಂಗಳೂರು: ದಕ್ಷಿಣ ಭಾರತದ ದೊಡ್ಡ ರಿಯಲ್ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿರುವ ಮಂತ್ರಿ ಡೆವಲಪರ್ಸ್ನ ಸಿಇಒ ಮತ್ತು ಎಂಡಿ ಸುಶೀಲ್ ಪಾಂಡುರಂಗ ಮಂತ್ರಿ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಇದರ ಬೆನ್ನಲ್ಲೇ ಇಡಿ ಅಧಿಕಾರಿಗಳು ಇಂದು(ಸೋಮವಾರ) ಬೆಳ್ಳಂಬೆಳಗ್ಗೆ ಸುಶೀಲ್ಗೆ ಸಂಬಂಧಿಸಿದ ಕಚೇರಿಗಳ ಮೇಲೆ 10ಕ್ಕೂ ಹೆಚ್ಚು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸುಶೀಲ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗಿದ್ದ ಸುಶೀಲ್ ಅವರನ್ನು ಶುಕ್ರವಾರ(ಜೂ.24) ಬಂಧಿಸಿದ್ದ ಅಧಿಕಾರಿಗಳು ಶನಿವಾರ ಕೋರ್ಟ್ಗೆ ಹಾಜರುಪಡಿಸಿದ್ದರು. ಕೋರ್ಟ್ ಸುಶೀಲ್ ಅವರನ್ನು 10 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿತ್ತು. ಇದೀಗ ಇಡಿ ಅಧಿಕಾರಿಗಳು ಸುಶೀಲ್ರ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸಾವಿರಾರು ಗ್ರಾಹಕರಿಗೆ ಫ್ಲ್ಯಾಟ್ ನೀಡುವ ಭರವಸೆ ನೀಡಿ ಕೋಟ್ಯಂತರ ರೂ. ಪಡೆದು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ಆರೋಪ ಸುಶೀಲ್ ಮೇಲಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಸೆಕ್ಷನ್ 19 ರ ಅಡಿ (ಪಿಎಂಎಲ್ಎ) ಕಸ್ಟಡಿಗೆ ತೆಗೆದುಕೊಂಡಿರುವ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. 2020ರ ಮಾ. 22ರಂದು ಎಫ್ಐಆರ್ ದಾಖಲು ಮಾಡಿದ್ದ ಇಡಿ ತನಿಖೆ ಪ್ರಾರಂಭಿಸಿತ್ತು. ಸುಶೀಲ್ ಅವರಲ್ಲದೆ ಕಂಪನಿ, ನಿರ್ದೇಶಕರು ಹಾಗೂ ಹಲವು ಉದ್ಯೋಗಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.
ವಿವಿಧ ಹಣಕಾಸು ಸಂಸ್ಥೆಗಳಿಂದ 5 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ. ಈ ಪೈಕಿ 1 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಕೆಲ ಸಾಲಗಳು ಸುಸ್ತಿಯಾಗಿವೆ. ಒಂದೇ ಪ್ರಾಜೆಕ್ಟ್ ಸಂಬಂಧ ವಿವಿಧ ಸಂಸ್ಥೆಗಳಿಂದ ಕಂಪನಿ ಸ್ವತ್ತುಗಳನ್ನು ಅಡವಿಟ್ಟು ಸಾಲ ಪಡೆದುಕೊಂಡಿದ್ದಾರೆ. ಹೀಗಾಗಿ ವಿಚಾರಣೆಗೆ ಬರಲು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ವಿಚಾರಣೆಗೆ ಗೈರುಹಾಜರಾಗಿದ್ದಲ್ಲದೆ ಮಹತ್ವದ ಮಾಹಿತಿ ಮುಚ್ಚಿಡುತ್ತಿದ್ದರು. ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಕೂಡ ಸರಿಯಾಗಿ ಸಲ್ಲಿಸಲಿಲ್ಲ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಕಳೆದ ವರ್ಷ ಐಟಿ ದಾಳಿ: ಸಾವಿರಾರು ಜನರಿಂದ ಹಣ ಪಡೆದು ಫ್ಲ್ಯಾಟ್ ಕೊಡದೆ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಸುಬ್ರಹ್ಮಣ್ಯನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಸಾರ್ವಜನಿಕರು ಇ.ಡಿ.ಗೂ ದೂರು ನೀಡಿದ್ದರು. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಮಂತ್ರಿ ಗ್ರೂಪ್ ಕಟ್ಟಡಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಳೆದ ವರ್ಷ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ ಬಹುತೇಕ ವ್ಯವಹಾರಗಳು ನಗದು ರೂಪದಲ್ಲಿ ನಡೆದಿರುವುದು ಪತ್ತೆಯಾಗಿತ್ತು. ಐಟಿ ದಾಳಿ ವೇಳೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿತ್ತು. ಅಲ್ಲದೆ ಹವಾಲ ರೂಪದಲ್ಲಿ ಹಣ ವರ್ಗಾವಣೆ ಆಗಿರುವ ಬಗ್ಗೆಯೂ ಅನುಮಾನ ಬಂದಿತ್ತು. ಆ ಹಣದ ವ್ಯವಹಾರದ ಬಗ್ಗೆ ಐಟಿ ಅಧಿಕಾರಿಗಳಿಗೆ ಸೂಕ್ತ ದಾಖಲೆ ಕೊಡುವಲ್ಲಿ ಸುಶೀಲ್ ವಿಫಲರಾಗಿದ್ದರು.