ಜಿಲ್ಲೆ

ಮಂತ್ರಾಕ್ಷತೆ ವಿತರಣೆ ಅಭಿಯಾನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಜ. 22ರಂದು ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪೂಜೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ ಹಾಗೂ ಆಮಂತ್ರಣ ಪತ್ರಿಕೆ ವಿತರಿಸುವ ಅಭಿಯಾನವನ್ನು ನಗರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಭಾನುವಾರ ನಡೆಸಿದರು.
ಇಲ್ಲಿನ ಟಿಕಾರೆ ರಸ್ತೆ ಶ್ರೀರಾಮ ಮಂದಿರದಲ್ಲಿ ಬೆಳಗ್ಗೆ ಸೇನೆಯ ಕಾರ್ಯಕರ್ತರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭಜನೆ ನಡೆಸಿದ ಕಾರ್ಯಕರ್ತರು, ರಾಮರಾಜ್ಯದ ಕಡೆಗೆ ನಮ್ಮ ನಡೆ ಎಂಬ ಘೋಷಣೆ ಮೊಳಗಿಸುವ ಮೂಲಕ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಶ್ರೀರಾಮ ಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಪೂಜೆಯ ಸಂದೇಶ ಸಾರಿದರು.
ಅಯೋಧ್ಯೆ ಶ್ರೀರಾಮ ಜನ್ಮಭೂಮಿಯ ರಾಮತೀರ್ಥ ಟ್ರಸ್ಟ್ ಮನವಿಯಂತೆ ಎಲ್ಲ ಜನರು ಜ. 22ರಂದು ಶ್ರೀರಾಮನ ಪೂಜೆ, ಸಂಕೀರ್ತನೆ ಮಾಡಬೇಕು. ಪಟಾಕಿ ಸಿಡಿಸಿ ಸಿಹಿ ಹಂಚಬೇಕು ನಂತರ ಸಂಜೆ ಐದು ದೀಪಗಳನ್ನು ಮನೆ ಮುಂದೆ ಹಂಚಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.