ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಯುಗಾದಿ ಪ್ರಯುಕ್ತ ಮೋಡಿಗಾರ ಆಟ ಪ್ರದರ್ಶಿಸಲಾಯಿತು. 
ಜಿಲ್ಲೆ

ಮಂತ್ರ-ತಂತ್ರಕ್ಕೆ ಪ್ರಾಧಾನ್ಯ ನೀಡದಂತೆ ಜಾಗೃತಿ

Kopala - Desk - Eraveni

ಹಗರಿಬೊಮ್ಮನಹಳ್ಳಿ: ಯುಗಾದಿ ಪ್ರಯುಕ್ತ ಹಂಪಾಪಟ್ಟಣ ಗ್ರಾಮದಲ್ಲಿ ಜನಪದ ಪರಂಪರೆಯ ಮೋಡಿಕಾರ ಆಟ ಸೋಮವಾರ ಸಂಜೆ ಆಡಲಾಯಿತು.

ಮೋಡಿಕಾರ ಪರಂಪರೆಯ ಪ್ರಮುಖ ಎಚ್.ಫಕೀರಪ್ಪ ಆಟದ ಕುರಿತು ಮಾಹಿತಿ ನೀಡಿ, ಗ್ರಾಮದ ಪ್ರಮುಖ ಬೀದಿಯಲ್ಲಿ ರಂಗು ರಂಗಿನ ಐದು ಚೌಕಟ್ಟನ್ನು ನಿರ್ಮಿಸಿ, ಅದರೊಳಗೆ ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸಿ, ಸಿಹಿ ಪದಾರ್ಥಗಳನ್ನು ಇಡಲಾಗುತ್ತದೆ. ನಂತರ ಆಟದ ಪ್ರತಿವಾದಿಗಳನ್ನು ಕರೆತರಲಾಗುತ್ತದೆ.

ಪೂಜೆಯ ಬಳಿಕ ಪ್ರತಿವಾದಿಗಳು ತಂತ್ರಗಳ ಮೂಲಕ ಜನರನ್ನು ರಂಜಿಸುತ್ತಾರೆ. ರಂಗ ಮಂಟಪದ ಮೇಲೆ ವಸ್ತುಗಳನ್ನು ಕದಿಯಲು ಬರುತ್ತಾರೆ. ಶಕ್ತಿ ದೇವತೆಯ ಆರಾಧಕ ವಿವಿಧ ಮಜಲುಗಳನ್ನು ಪ್ರದರ್ಶಿಸಿ ಪ್ರತಿವಾದಿಗಳನ್ನು ಎದುರಿಸಲು ತಂತ್ರ ಬಳಸುತ್ತಾರೆ. ಇದರಿಂದ ಸಾರ್ವಜನಿಕರಿಗೆ ಮನರಂಜನೆಯಾಗುತ್ತದೆ ಎಂದರು.

ಇದರ ವಿಶೇಷವೆಂದರೆ ಕಾಲ ಕಾಲಕ್ಕೆ ಉತ್ತಮ ಮಳೆ, ಬೆಳೆಯಾಗಲಿ. ಗ್ರಾಮದಲ್ಲಿ ಕಳ್ಳತನ, ಅನಾರೋಗ್ಯ ಕಾಡದಿರಲಿ. ಸಾರ್ವಜನಿಕರು ಶಾಂತಿ, ಸೌಹಾರ್ದ, ನೆಮ್ಮದಿಯಿಂದಿರಲಿ ಎಂದು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಮಂತ್ರ, ತಂತ್ರಕ್ಕೆ ಪ್ರಾಧಾನ್ಯ ನೀಡದೆ ಜಾಗೃತರಾಗಲು ಜನರಿಗೆ ತಿಳಿಸಲಾಗುತ್ತೆ ಎಂದು ತಿಳಿಸಿದರು.

ತೊಗರಿ ಹನುಮಂತಪ್ಪ, ಚಿಂತ್ರಪಳ್ಳಿ ಬಸಪ್ಪ, ಮಲ್ಲಪ್ಪ, ವಟುಮ್ಮನಹಳ್ಳಿ ಮಂಜುನಾಥ, ಗುಬ್ಬೇರ್ ಅಂಜಿನಪ್ಪ, ಬಡಿಗೇರ್ ಪಂಪಣ್ಣ, ಎಚ್.ಹುಲಗಪ್ಪ, ಎಚ್.ನಿಂಗಪ್ಪ ಪಾಲ್ಗೊಂಡಿದ್ದರು.