ಜಿಲ್ಲೆ

ಮಾ.೧೪ ರಂದು ಮಂಟಿಗಮ್ಮ ದೇವಿ ಜಾತ್ರೊತ್ಸವ

ಆದರ್ಶ್. ಎಂ.ಕೆ.

ಕೂಡಿಗೆ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಾವೇರಿ ನದಿ ದಂಡೆಯಲ್ಲಿರುವ ಗಡಿಭಾಗ ಶಿರಂಗಾಲ ಗ್ರಾಮದಲ್ಲಿ ಮಾ.೧೪ ರಂದು ಗ್ರಾಮದೇವತೆ ಶ್ರಿ ಮಂಟಿಗಮ್ಮ ದೇವಿಯ ಉತ್ಸವ ಮತ್ತು ಜಾತ್ರೊತ್ಸವ ನಡೆಯಲಿದೆ.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರಿ ಮಂಟಿಗಮ್ಮ ದೇವಿಯ ಗ್ರಾಮೀಣ ಭಾಗದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಮಂಟಿಗಮ್ಮ ದೇವಿಯ ಉತ್ಸವದಲ್ಲಿ ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಜನರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಶುಕ್ರವಾರ ಗ್ರಾಮದ ಕೋಟೆಯ ದೇವಿಯ ಗದ್ದಿಗೆಯಲ್ಲಿ ರಾತ್ರಿ ೧೦.೩೦ಕ್ಕೆ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದೇವಿಯನ್ನು ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊಂದಿಗೆ ಪವಿತ್ರ ಬನಕ್ಕೆ ದೇವಿಗೆ ಸಂಬಂಧಿಸಿದ ಆಭರಣಗಳನ್ನೊಳಗೊಂಡ ಬುಟ್ಟಿ ಮತ್ತಿತರರ ಸಾಂಪ್ರದಾಯಿಕ ಸಾಮಗ್ರಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ. ದೇವಿಯ ಬನದಲ್ಲಿ ಹಾಕಿರುವ ಅಗ್ನಿಕುಂಡವನ್ನು ಹರಕೆ ಹೊತ್ತ ಭಕ್ತಾದಿಗಳು ತುಳಿದು ದೇವರ ದರ್ಶನ ಪಡೆಯಲಿದ್ದಾರೆ. ಹಬ್ಬದ ಅಂಗವಾಗಿ ಶುಕ್ರವಾರ ರಾತ್ರಿ ೧೦ ಗಂಟೆಗೆ ಗ್ರಾಮದ ಸಂತೆಮಾಳ ಮೈದಾನದಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಆಯೋಜಿಸಲಾಗಿದೆ.

ಗ್ರಾಮ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಕಾರ್ಯದರ್ಶಿ ಎಂ.ಎಸ್.ಗಣೇಶ್ ಹಾಗೂ ಸಮಿತಿಯ ನೇತೃತ್ವದಲ್ಲಿ ನಾನಾ ಪೂಜಾ ಕೈಂಕರ್ಯಗಳು ನಡೆಯಲಿವೆ.

ಗ್ರಾಮೀಣ ಕ್ರಿಡಾಕೂಟ: ಗ್ರಾಮ ದೇವತಾ ಸಮಿತಿ ವತಿಯಿಂದ ದೇವಿಯ ಉತ್ಸವ ಅಂಗವಾಗಿ ಮಾ.೧೫ ಶನಿವಾರ ಮತ್ತು ಮಾ.೧೬ ರಂದು ಭಾನುವಾರದಂದು ವಿವಿಧ ಕ್ರಿಡಾಕೂಟ ಹಾಗೂ ಮನೋರಂಜನ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.೧೬ ರಂದು ಭಾನುವಾರ ರಾತ್ರಿ ೮ ಗಂಟೆಗೆ ಗೆಳಯರ ಬಳಗದ ವತಿಯಿಂದ ರಸಮಂಜರಿ ಆರ್ಕೆಸ್ಟ್ರಾ ಏರ್ಪಡಿಸಲಾಗಿದೆ.

ಮಾ.೧೭ರಂದು ವಾರ್ಷಿಕ ರಥೋತ್ಸವ: ಶಿರಂಗಾಲ ಗ್ರಾಮದ ಕಾವೇರಿ ನದಿ ದಂಡೆ ಮೇಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾ.೧೭ ರಂದು ಸೋಮವಾರ ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀ ಉಮಾಮಹೇಶ್ವರ ವಾರ್ಷಿಕ ರಥೋತ್ಸವ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.