ಜಿಲ್ಲೆ

ಹಾರಂಗಿ ಕಮಾನು ಸೇತುವೆಗೆ ಸಂಪುಟ ಅನುಮೋದನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಹಾರಂಗಿ, ಎಡವನಾಡು ಸುತ್ತಮುತ್ತಲಿನ ಗ್ರಾಮಗಳ ಬಹುದಿನದ ಬೇಡಿಕೆಯಾದ ಹಾರಂಗಿಗೆ ಕಮಾನು ಸೇತುವೆ ನಿರ್ಮಾಣದ  36.50 ಕೋಟಿ ರೂ. ವೆಚ್ಚದ ಯೋಜನೆಗೆ ಗುರುವಾರ ನಡೆದ ರಾಜ್ಯ ‌ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಈ ಸಂಬಂಧ ವಿಜಯವಾಣಿಗೆ ಮಾಹಿತಿ ನೀಡಿರುವ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ, ಕುಶಾಲನಗರದ ಹುಲುಗುಂದ ಗ್ರಾಮದ ಬಳಿ ಹಾರಂಗಿ ಜಲಾಶಯದ ಕೆಳಭಾಗದಲ್ಲಿ  ಹಾರಂಗಿ ನದಿಗೆ‌ ಅಡ್ಡಲಾಗಿ ಕಮಾನು ಸೇತುವೆ (Arch  Bridge) ನಿರ್ಮಾಣ ಸಂಬಂಧ ಸಲ್ಲಿಸಿದ್ದ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇಲ್ಲಿ ಈ ಸೇತುವೆ ನಿರ್ಮಾಣದಿಂದ ಸಾಕಷ್ಟು ರೀತಿಯಲ್ಲಿ ಪ್ರಯೋಜನವಾಗಲಿದೆ. ಹಾರಂಗಿಯ ಸೌಂದರ್ಯ ವೖದ್ದಿಸುವುದಲ್ಲದೇ ಈಗ ಜಲಾಶಯದ ಮುಂಬದಿಯಲ್ಲಿನ ಅಪಾಯಕಾರಿ ಪರಿಸ್ಥಿತಿ ನಿವಾರಣೆಯಾಗಲಿದೆ. ಮಳೆಗಾಲದ ಅವಧಿಯಲ್ಲಿ ಸಂಪರ್ಕ ಕಡಿತಗೊಳ್ಳುತ್ತಿದ್ದ ಗ್ರಾಮಗಳಿಗೆ ಸಂಚಾರ ವ್ಯವಸ್ಥೆ ಸುಗಮಗೊಳ್ಳಲಿದೆ.

ಹಾರಂಗಿ ಜಲಾಶಯ ಬಳಿ ಮತ್ತೊಂದು ಪ್ರವಾಸಿ ಆಕರ್ಷಣೆಯ ಕೇಂದ್ರವೂ ತಲೆ ಎತ್ತಿದಂತೆ ಆಗಲಿದೆ. ಇದರ ಜತೆಗೆ ವಿತರಣಾ ನಾಲೆಗಳ ಆಧುನೀಕರಣಕ್ಕೂ 49.90 ಕೋಟಿ ರೂ. ವೆಚ್ಚದ ಯೋಜನೆಗೆ‌ ಅನುಮೋದನೆ ಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪೂರ್ಣ ಸರ್ಕಾರವೇ ಕೊಡಗಿನ ಅಭಿವೃದ್ದಿಗೆ ದೊಡ್ಡ‌ ಕೊಡುಗೆ ನೀಡಿದಂತಾಗಿದೆ ಎಂದಿದ್ದಾರೆ.