ಮಡಿಕೇರಿ
ಮಡಿಕೇರಿ ಜಿಲ್ಲಾಡಳಿತ ಭವನ ತಡೆಗೋಡೆ ಕಾಮಗಾರಿ ವಿಷಯ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿತು. ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ತಡೆಗೋಡೆ ನಿರ್ಮಾಣಕ್ಕೆ ಬಳಸಿದ ತಂತ್ರಜ್ಞಾನ ಸರಿಯಾಗಿಲ್ಲ. ತಡೆಗೋಡೆ ಅಪಾಯಕಾರಿ ಸ್ಥಿತಿ ತಲುಪಿದ್ದು ಸ್ಲ್ಯಾಬ್‌ಗಳನ್ನು ಈಗ ಮತ್ತೆ ಜೋಡಣೆ ಮಾಡಲಾಗುತ್ತಿದೆ. ಇದರಿಂದಾಗಿ ತಡೆಗೋಡೆ ಕುಸಿಯುವುದರ ಜೊತೆಗೆ ಜಿಲ್ಲಾಡಳಿತ ಭವನ ಕಟ್ಟಡವೂ ಧರಾಶಾಹಿ ಆಗುವ ಆತಂಕ ಇದೆ ಎಂದರು. ಈ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕೆಂದೂ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಶಾಸಕರ ಜತೆ ಪ್ರತ್ಯೇಕವಾಗಿ ಚರ್ಚಿಸುತ್ತೇನೆ ಎಂದರು. ಬಳಿಕ ವಿರಾಮದ ಅವಧಿಯಲ್ಲಿ ಸಚಿವರನ್ನು ಭೇಟಿಯಾದ ಮಂತರ್ ಗೌಡ, ಕಾಮಗಾರಿ ಬಗ್ಗೆ ವಿವರಿಸಿ, ತನಿಖೆ ನಡೆಸುವಂತೆ ಮನವಿ ಮಾಡಿದರು.