ಮೇಲುಕೋಟೆಯ ಒಕ್ಕಲಿಗರ ಬೀದಿಯ ಶ್ರೀರಾಮಮಂದಿರಕ್ಕೆ ಆಷಾಢ ಶುಕ್ರವಾರ ಮಂಟಪ ಪ್ರತಿಷ್ಠೆ ಮಾಡಿಸಿ ಶ್ರೀಚೆಲುವನಾರಾಯಣಸ್ವಾಮಿಯ ಉತ್ಸವ ನೆರವೇರಿಸಲಾಯಿತು.  
ಜಿಲ್ಲೆ

ಶ್ರೀರಾಮಮಂದಿರದಲ್ಲಿ ಮಂಟಪೋತ್ಸವ

ರವಿಕುಮಾರ್ ಪಿ. ಕೆ

ಮೇಲುಕೋಟೆ: ಇಲ್ಲಿನ ಒಕ್ಕಲಿಗರ ಬೀದಿಯ ನೂತನ ಶ್ರೀರಾಮಮಂದಿರಕ್ಕೆ ಆಷಾಢದ ಪ್ರಥಮ ಶುಕ್ರವಾರ ಮಂಟಪ ಪ್ರತಿಷ್ಠೆ ಮಾಡಿಸಿ ಶ್ರೀ ಚೆಲುವನಾರಾಯಣಸ್ವಾಮಿಯ ಉತ್ಸವ ನೆರವೇರಿಸಲಾಯಿತು. ಆಚಾರ್ಯ ರಾಮಾನುಜರು ಹಾಗೂ ಶ್ರೀದೇವಿ ಭೂದೇವಿಯೊಂದಿಗೆ ನೆರವೇರಿದ ಉತ್ಸವದಲ್ಲಿ ಸ್ವಾಮಿಗೆ ಇಡೀ ಒಕ್ಕಲಿಗ ಸಮುದಾಯ ಪಾಲ್ಗೊಂಡು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾದರು.

ಒಕ್ಕಲಿಗರ ಬೀದಿಯಲ್ಲಿದ್ದ ಶ್ರೀರಾಮಮಂದಿರಕ್ಕೆ ಅದಿದೈವ ಚೆಲುವನಾರಾಯಣಸ್ವಾಮಿ ಅವರ ಉತ್ಸವ ನೆರವೇರಬೇಕೆಂಬ ರೈತಸಮುದಾಯದವರ ನೂರಾರು ವರ್ಷಗಳ ಕನಸಿತ್ತಾದರೂ ಸಾಧ್ಯವಾಗಿರಲಿಲ್ಲ. ಒಗ್ಗಟ್ಟಿನಿಂದ ದೇವರ ಉತ್ಸವ ನಡೆಸಲು ಪೂರಕವಾಗಿ ವಿಶಾಲವಾಗಿ ನಿರ್ಮಿಸಿದ್ದ ರಾಮಮಂದಿರಕ್ಕೆ ಆಷಾಢ ಶುಕ್ರವಾರ ಮಂಟಪೋತ್ಸವ ನೆರವೇರುವ ಮೂಲಕ ರೈತ ಸಮುದಾಯದವರ ಕನಸು ನನಸಾದಂತಾಯಿತು. ಚೆಲುವನಾರಾಯಣಸ್ವಾಮಿಯ ಉತ್ಸವ ಆಗಮನಕ್ಕೆ ಇಡೀ ಸಮುದಾಯ ಕಾತರ ಮತ್ತು ಸಂಭ್ರಮದಿಂದ ಕಾಯುತ್ತಿತ್ತು. ದೇವಾಲಯದಿಂದ ರಾಮಮಂದಿರದವರೆಗೆ ಇಡೀ ಬೀದಿಗಳನ್ನು ತಳಿರು ತೋರಣ ರಂಗವಲ್ಲಿಗಳಿಂದ ಸಿಂಗಾರ ಮಾಡಲಾಗಿತ್ತು. ಸಂಜೆ ವಿಶೇಷ ಮಂಗಳವಾದ್ಯದೊಂದಿಗೆ ನಡೆದ ಸ್ವಾಮಿಯ ಮೆರವಣಿಗೆಯ ವೇಳೆ ಪಟಾಕಿಗಳನ್ನು ಸಿಡಿಸಲಾಯಿತು. ಗೋವಿಂದ ನಾಮಸ್ಮರಣೆ ಮಾಡುತ್ತಾ ಇಡೀ ಸಮುದಾಯದ ಕುಟುಂಬದವರೆಲ್ಲರೂ ಚೆಲುವನಾರಾಯಣಸ್ವಾಮಿಗೆ ಹಣ್ಣುಕಾಯಿ ಅರ್ಪಿಸಿ ಪೂಜೆ ಮಾಡಿಸಿ ಪ್ರಸಾದ ಸ್ವೀಕರಿಸಿದ ನಂತರ ಸ್ವಾಮಿಯ ಉತ್ಸವ ದೇವಾಲಯಕ್ಕೆ ಮರಳಿತು.

ಇಡೀ ಒಕ್ಕಲಿಗ ಸಮುದಾಯ ಸೇರಿ ಭಕ್ತಿಪೂರ್ವಕವಾಗಿ ಹಮ್ಮಿಕೊಂಡಿದ್ದ ಪ್ರಥಮ ಮಂಟಪೋತ್ಸವದಲ್ಲಿ ದೇವಾಲಯದ ಸ್ಥಾನೀಕರು, ಅರ್ಚಕರು, ಪರಿಚಾರಕರು ಕೈಂಕರ್ಯಪರರು, ರೈತಭವನ ಹಾಗೂ ರಾಮಮಂದಿರದ ಯಜಮಾನರು, ಯುವಕರು, ಮಹಿಳೆಯರು ಭಾಗಿಯಾಗಿದ್ದರು. ಮಂಟಪೋತ್ಸವದ ಅಂಗವಾಗಿ ಶ್ರೀರಾಮಮಂದಿರವನ್ನು ತಳಿರುತೋರಣ ಹಾಗೂ ರಂಗವಲ್ಲಿ, ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಮಾಡಲಾಗಿತ್ತು.

ಇದಕ್ಕೂ ಮುನ್ನ ಬೆಳಗ್ಗೆ ರಾಮಮಂದಿರದಲ್ಲಿ ಮಂಟಪ ಪ್ರದಕ್ಷಿಣೆಗೆ ಹೋಮ ನೆರವೇರಿಸಿ ಸಾಂಪ್ರದಾಯಿಕವಾಗಿ ಮಂಟಪ ಪ್ರತಿಷ್ಠೆ ಮಾಡಿಸಲಾಯಿತು. ಸಂಜೆ ಒಕ್ಕಲಿಗ ಜನಾಂಗದ ಮುಖಂಡರು, ಯುವಕರು ಸೇರಿ ಸ್ವಾಮಿಗೆ ಅರ್ಪಿಸಲು ಸಿದ್ಧ ಮಾಡಿದ್ದ ಪುಷ್ಪಮಾಲೆಗಳ ಬುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಶ್ವೇತಛತ್ರಿ ಮಂಗಳವಾದ್ಯದೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ಸಮರ್ಪಿಸಿದರು.