ಬೆಂಗಳೂರು: ಮಂತ್ರಾಲಯದ ಕರ್ನಾಟಕ ಛತ್ರದಲ್ಲಿ ರಾಜ್ಯದ ಭಕ್ತರಿಗೆ ಅನುಕೂಲವಾಗುವಂತೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂರು ಕೊಠಡಿಗಳ ಅತಿಥಿ ಗೃಹದ ಕಾಮಗಾರಿ ಕಳಪೆಯಿಂದ ಕೂಡಿರುವ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಕುರಿತು ಲೋಕಾಯುಕ್ತ ತನಿಖೆಗೆ ವಹಿಸುವಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಕಂದಾಯ ಇಲಾಖೆ (ಮುಜರಾಯಿ) ಪ್ರಧಾನ ಕಾರ್ಯದರ್ಶಿಯವರಿಗೆ ಆದೇಶಿಸಿದ್ದಾರೆ.
2011ರಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು, 2019ರಲ್ಲಿ ಕಟ್ಟಡ ನಿರ್ಮಾನ ಪೂರ್ಣಗೊಳಿಸಿ ಹಸ್ತಾಂತರಿಸಲಾಗಿತ್ತು. ನಂತರದಲ್ಲಿ ಈ ಕಟ್ಟಡ ಗೋಡೆಗಳಲ್ಲಿ ಬಿರುಕು ಮೂಡಿರುವುದು, ನೀರು ಸೋರಿಕೆ, ವಿದ್ಯುತ್ ಸಂಪರ್ಕದ ಅವ್ಯವಸ್ಥೆ ಸೇರಿ ಅನೇಕ ಲೋಪಗಳು ಕಂಡುಬಂದಿದ್ದವು. ಈ ಬಗ್ಗೆ ಜಾಲತಾಣಗಳಲ್ಲೂ ಸಾರ್ವಜನಿಕರು ಟೀಕಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿ, ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಬೇಕು ಎಂದು ಸಚಿವರು ಆದೇಶಿಸಿದ್ದಾರೆ.