ಜಿಲ್ಲೆ

ಮನೋರಂಜನ್ ಸಂಸತ್ ಭವನದಲ್ಲಿ ಕೋಲಾಹಲ ಎಬ್ಬಿಸಿದ ಕೃತ್ಯಕ್ಕೆ ಪ್ರಸ್ತಕಗಳೇ ಪ್ರೇರಣೆ?

ಮೈಸೂರು: ಪುಸ್ತಕ ಓದುವ ಹವ್ಯಾಸವೇ ಮನೋರಂಜನ್‌ನನ್ನು ಸಂಸತ್ ಭವನದಲ್ಲಿ ಕೋಲಾಹಲ ಎಬ್ಬಿಸಲು ಪ್ರೇರೇಪಿಸಿತೇ ಎಂಬ ಪ್ರಶ್ನೆ ಕಾಡುತ್ತಿದೆ.

ಈತ ಬಿಇ ಪದವಿ ಪಡೆದರೂ ಇಂಜಿನಿಯರ್ ವೃತ್ತಿ ಆರಂಭಿಸಲಿಲ್ಲ. ಬದಲಿಗೆ ಹೆಚ್ಚು ಹೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದ. ಅದು ಕೂಡ ದಾರ್ಶನಿಕರು, ಕ್ರಾಂತಿಕಾರಿಗಳ ಬಗ್ಗೆ ಹೆಚ್ಚು ಓದಿಕೊಂಡಿದ್ದ. ಕ್ರಾಂತಿಕಾರಿ ಚಿ ಗುವೆರಾ ಬಗ್ಗೆ ಹೆಚ್ಚು ಓದಿಕೊಂಡಿದ್ದ. ಅಷ್ಟೇ ಅಲ್ಲ, ಪಾತಕಿ ದಾವೂದ್ ಇಬ್ರಾಹಿಂ ಬಗೆಗಿನ ‘ದಾದಾಗಿರಿ ಟು ದುಬೈ’, ‘ದಿ ಆರ್ಟ್ ವಾರ್’, ‘ವಾಟರ್ ವಾರ್ಸ್‌’, ‘ಎದೆಗಾರಿಕೆ’ ಇಂತಹ ಪುಸ್ತಕಗಳನ್ನು ಹೆಚ್ಚಾಗಿ ಓದಿಕೊಂಡಿದ್ದ. ಹಾಗಾಗಿ, ಮನೋರಂಜನ್‌ನ ಇಂದಿನ ನಡೆಗೆ ಇದೇ ಮೂಲಕಾರಣ. ಬಿಇ ಪದವಿ ಪಡೆದರೂ ಇಂಜಿನಿಯರ್ ಆಗದಿದ್ದರೂ ತಾನು ಓದಿದ ಪುಸ್ತಕಗಳ ರೀತಿಯೇ ಬದಲಾಗಿದ್ದಾನೆ ಎನ್ನಲಾಗಿದೆ.

ಅಲ್ಲದೆ, ಸ್ವಾತಂತ್ರ್ಯ ಹೋರಾಟದ ಕಥನಗಳನ್ನು ಅಧ್ಯಯನ ಮಾಡುತ್ತಿದ್ದ. ಅತಿ ಹೆಚ್ಚು ಬೆಲೆ ಬಾಳುವ ಪುಸ್ತಕಗಳನ್ನೇ ಖರೀದಿಸುತ್ತಿದ್ದ. ಸ್ವಾಮಿ ವಿವೇಕಾನಂದರ ಬಗ್ಗೆ ಹೆಚ್ಚು ಓದುಕೊಂಡಿದ್ದ ಎನ್ನಲಾಗಿದೆ. ಇಂಗ್ಲೆಂಡ್, ಫ್ರಾನ್ಸ್, ಕೆನಡಾ, ಅಮೆರಿಕ ಮೂಲದ ಲೇಖಕರು ರಚಿಸಿರುವ ಸಾಕಷ್ಟು ಪುಸ್ತಕಗಳು ಅವನ ಮನೆಯಲ್ಲಿ ದೊರೆತಿವೆ. ಓದಿನೊಂದಿಗೆ ವ್ಯವಸ್ಥೆ ವಿರುದ್ಧ ಬೇಸತ್ತಿದ್ದ ಮನೋರಂಜನ್, ಬಹಳ ವರ್ಷಗಳಿಂದ ಮತದಾನವನ್ನೇ ಮಾಡಿಲ್ಲ.

‘ಪುಸ್ತಕ ಓದಿನಿಂದ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಬೇಕು ಎಂದು ಬಯಸುತ್ತಿದ್ದ. ಸಮಾಜ ಸೇವೆ ಮಾಡುವ ಆಸೆ ಇಟ್ಟುಕೊಂಡಿದ್ದ. ಆದರೆ, ಇಂದು ಅವನನ್ನು ಈ ಸ್ಥಿತಿಯಲ್ಲಿ ನೋಡುತ್ತಿರುವುದು ಅಚ್ಚರಿ ಉಂಟುಮಾಡಿದೆ. ಆತ ಎಲ್ಲವನ್ನೂ ಯಾರ ಬಳಿಯೂ ಹಂಚಿಕೊಳ್ಳುತ್ತಿರಲಿಲ್ಲ. ಅವನು ಮನಸ್ಸಿನಲ್ಲಿ ಏನು ಯೋಚನೆ ಮಾಡುತ್ತಿದ್ದಾನೆ ಎಂಬುದೇ ತಿಳಿಯುತ್ತಿರಲಿಲ್ಲ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದು ಸದಾ ಹೇಳುತ್ತಿದ್ದ’ ಎಂದು ಆತನನ್ನು ಹತ್ತಿರದಿಂದ ನೋಡಿದವರೊಬ್ಬರು ತಿಳಿಸಿದ್ದಾರೆ.