ಜಿಲ್ಲೆ

ಮನ್‌ಮುಲ್ ಹಗರಣ ಪರಿಶೀಲಿಸಿ: ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಗೆ ಪ್ರಧಾನಮಂತ್ರಿ ಕಾರ್ಯಾಲಯ ಸೂಚನೆ

ಮಂಡ್ಯ: ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್)ದಲ್ಲಿ ನಡೆದಿದೆ ಎನ್ನಲಾದ ಹಲವು ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು. ಅದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ-2 ಅವರಿಗೆ ಸೂಚನೆ ನೀಡಲಾಗಿದೆ.
ಹಿಂದಿನ ಆಡಳಿತ ಮಂಡಳಿಯಿಂದ 73 ಕೋಟಿ ರೂ. ವಸೂಲಿ, ಹಾಲಿಗೆ ನೀರು ಮಿಶ್ರಣ ಮಾಡಿ ವಂಚನೆ, ಅಕ್ರಮ ನೇಮಕಾತಿ ಸೇರಿದಂತೆ ಹಲವು ಹಗರಣಗಳ ತನಿಖೆಗೆ ಒತ್ತಾಯಿಸಿ ಜಿಲ್ಲಾ ಹಾಲು ಉತ್ಪಾದಕರ ಸಮಿತಿ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದೆ. ಅದರ ಮುಂದುವರಿದ ಭಾಗವಾಗಿ ಸಮಿತಿ ಅಧ್ಯಕ್ಷರೂ ಆಗಿರುವ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಮನ್‌ಮುಲ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಬಗ್ಗೆ ಪ್ರಧಾನಮಂತ್ರಿ ಅವರಿಗೆ ಸೆ.11ರಂದು ಇ ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿರುವ ಪಿಎಂ ಕಾರ್ಯಾಲಯ ದೂರಿನ ಪರಿಶೀಲನೆಗೆಂದು ಸೆ.13ರಂದು ಸೂಚನೆ ನೀಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಸಿ.ಮಧುಚಂದನ್, ಮನ್‌ಮುಲ್‌ನಲ್ಲಿ ನಡೆದಿರುವ ಅಕ್ರಮದ ಬಗ್ಗೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಪ್ರಧಾನಮಂತ್ರಿ ಕಚೇರಿಯಿಂದ ರಾಜ್ಯದ ಇಲಾಖೆಗೆ ಸೂಚನೆ ಕೊಡಲಾಗಿದೆ. ಇದಲ್ಲದೆ, ಹಗರಣದ ತನಿಖೆಗೆ, ಅದರಲ್ಲೂ ಈಗ ನಡೆಯುತ್ತಿರುವ 187 ಹುದ್ದೆ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಸಚಿವರಾದ ಕೆ.ಗೋಪಾಲಯ್ಯ, ಸೋಮಶೇಖರ್, ಕೆಎಂಎಫ್ ಎಂಡಿ, ಮನ್‌ಮುಲ್ ಎಂಡಿಗೆ ಪತ್ರ ಬರೆಯಲಾಗಿದೆ. ಅಕ್ರಮ ಕಣ್ಣಿಗೆ ಕಾಣುತ್ತಿದ್ದರೂ ಕ್ರಮ ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಲ್ಲಿ ಎಲ್ಲ ಪಕ್ಷದವರೂ ಸೇರಿಕೊಂಡಿದ್ದಾರೆನ್ನುವ ಅನುಮಾನ ಮೂಡುತ್ತಿದೆ ಎಂದರು.
ಅಂತೆಯೇ ಮನ್‌ಮುಲ್‌ನಲ್ಲಿ ಅಕ್ರಮ ನೇಮಕಾತಿ ನಡೆಯುತ್ತಿದ್ದು, ರದ್ದುಗೊಳಿಸುವಂತೆ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿಯಿಂದ ಸಲ್ಲಿಸಿದ್ದ ದೂರನ್ನು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಿದೆ. ಕೆಲವೇ ದಿನದಲ್ಲಿ ವಿಚಾರಣೆಗೆ ಬರಲಿದೆ. ಇದಲ್ಲದೆ, ನೇಮಕಾತಿ ಪ್ರಕ್ರಿಯೆಯಲ್ಲಿಯೇ ಹಲವು ದೋಷವಿರುವುದು ಅಕ್ರಮ ಎನ್ನುವುದನ್ನು ತೋರಿಸುವಂತಿದೆ. ನಿಯಮದ ಪ್ರಕಾರ ಗ್ರೂಪ್ ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಮೌಖಿಕ ಸಂದರ್ಶನ ಇರುವುದಿಲ್ಲ. ಆದರೆ ಒಕ್ಕೂಟ ಹೊರಡಿಸಿರುವ ಅಧಿಸೂಚನೆಯಂತೆ ಈ ಎರಡು ಹುದ್ದೆ ನೇಮಕಾತಿಗೂ ಮೌಖಿಕ ಸಂದರ್ಶನ ನೀಡಲಾಗಿದೆ. 15 ಅಂಕಗಳಿಗೆ ಮೌಖಿಕ ಸಂದರ್ಶನ ಮಾಡುತ್ತಿದ್ದು, ಇದು ಅಕ್ರಮವಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು.
ಇನ್ನು ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯ ದೇಶದಲ್ಲಿಯೇ ಪ್ರಖ್ಯಾತಿ ಪಡೆದಿವೆ. ಆದರೆ ಒಕ್ಕೂಟ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುಮತಿ ಕೊಟ್ಟಿದೆ. ಹಾಗಿದ್ದರೆ ಮೈಸೂರು, ಬೆಂಗಳೂರು ವಿವಿಗಳ ಮೇಲೆ ವಿಶ್ವಾಸವಿಲ್ಲವೇ? ಆದ್ದರಿಂದ ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಅಂತೆಯೇ ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆಂದು ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಸಮಿತಿಯ ಶಶಿಧರ್ ಅಜ್ಜಹಳ್ಳಿ, ಕಾರಸವಾಡಿ ಮಂಜೇಗೌಡ, ಪಣಕನಹಳ್ಳಿ ರಮೇಶ್, ಬೆಳ್ಳುಂಡಗೆರೆ ಶ್ರೀಕಾಂತ್ ಇದ್ದರು.