ಜಿಲ್ಲೆ

ಹಣಕ್ಕಾಗಿ ಮನ್‌ಮುಲ್‌ನಲ್ಲಿ ನೇಮಕಾತಿ: ಲೋಕಾಯುಕ್ತಕ್ಕೆ ದೂರು ಕೊಡಲು ಸಿದ್ಧತೆ

reportermys

ಮಂಡ್ಯ: ಮಂಡ್ಯ ಹಾಲು ಒಕ್ಕೂಟ(ಮನ್‌ಮುಲ್)ದಲ್ಲಿ ಅನಗತ್ಯವಾಗಿ 187 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವ ಮೂಲಕ ಹಣ ಮಾಡುವ ದಂಧೆ ಇಳಿದಿದ್ದಾರೆ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಆರೋಪಿಸಿದರು.
ಸೆ.4ರಂದು ನೇಮಕಾತಿ ಪರೀಕ್ಷೆ ನಡೆಸಲು ಒಕ್ಕೂಟ ಸಿದ್ಧತೆ ನಡೆಸಿದ್ದು, ಈ ನೇಮಕಾತಿಗೆ ತಡೆಯಾಜ್ಞೆ ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಇದರ ಜತೆಗೆ ಮೆಗಾ ಡೇರಿ ಸ್ಥಾಪನೆಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಲೋಕಾಯುಕ್ತರಿಗೂ ದೂರು ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸ್ತುತ ಮನ್‌ಮುಲ್‌ನಲ್ಲಿ 285 ಖಾಯಂ ನೌಕರರು ಹಾಗೂ 1300 ಹೊರ ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ 510 ಹುದ್ದೆಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಸಹಕಾರ ಇಲಾಖೆಯ ಉಪನಿಬಂಧಕರಿಂದ ಮಂಜೂರಾತಿ ಪಡೆದುಕೊಂಡಿದ್ದಾರೆ. ಮೆಗಾ ಡೈರಿ ನಿರ್ಮಾಣವಾಗಿರುವಾಗ ಇಷ್ಟೊಂದು ಹುದ್ದೆಯ ಅಗತ್ಯವಿಲ್ಲದಿದ್ದರೂ ಹಣ ಮಾಡುವ ಏಕೈಕ ಉದ್ದೇಶದಿಂದ ಹೆಚ್ಚುವರಿ ಹುದ್ದೆಗಳನ್ನು ಸೃಷ್ಠಿಸಿ ಆರ್ಥಿಕ ಹೊರೆಯನ್ನುಂಟುಮಾಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್. ಕೆಂಪೂಗೌಡ, ಮುಖಂಡರಾದ ಪಿ.ಡಿ. ರಮೇಶ್, ವಿಜಯಕುಮಾರ್, ಹಾಲಹಳ್ಳಿ ಮಹೇಶ್, ಲಿಂಗಪ್ಪಾಜಿ ಗೋಷ್ಠಿಯಲ್ಲಿದ್ದರು.