ಜಿಲ್ಲೆ

ಕಾಂಗ್ರೆಸ್‌ಗೆ ಪ್ರತಿಷ್ಠೆ, ಎನ್‌ಡಿಎಗೆ ಅಸ್ಥಿತ್ವ: ಮನ್‌ಮುಲ್ ಚುನಾವಣೆಯಲ್ಲಿ ಹಣವೇ ಪ್ರಧಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರತಿಷ್ಠಿತ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್)ದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್, ಬಿಜೆಪಿ ಮೈತ್ರಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಗದ್ದುಗೆ ಹಿಡಿಯಲು ಕಸರತ್ತು, ತಂತ್ರಗಾರಿಕೆ ಕೂಡ ಭರ್ಜರಿಯಾಗಿದೆ.

ಮನ್‌ಮುಲ್ ಚುನಾವಣೆಯಲ್ಲಿ ರಾಜಕೀಯ ಪಕ್ಷದ ಚಿಹ್ನೆಯಡಿ ಅಭ್ಯರ್ಥಿಗಳ ಸ್ಪರ್ಧೆ ಇರುವುದಿಲ್ಲ. ಬದಲಿಗೆ ಪಕ್ಷದ ಬಾಹ್ಯ ಬೆಂಬಲವಿರಲಿದೆ. ಆದಾಗ್ಯೂ ಇಲ್ಲಿ ಅಭ್ಯರ್ಥಿಗಳಿಗಿಂತ ಪಕ್ಷದ ಬೆಂಬಲವೇ ಪ್ರಧಾನವಾಗಿದೆ. ಮನ್‌ಮುಲ್ ಗದ್ದುಗೆ ಹಿಡಿಯುವುದು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಮುಖ್ಯವಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ವರ್ಚಸ್ಸಿನ ಪ್ರಶ್ನೆಯಾಗಿದೆ. ಇನ್ನೊಂದೆಡೆ ತನ್ನ ತೆಕ್ಕೆಯಲ್ಲಿದ್ದ ಆಡಳಿತವನ್ನು ಕಳೆದುಕೊಂಡಿರುವ ಜೆಡಿಎಸ್, ಬಿಜೆಪಿ ಬೆಂಬಲದೊಂದಿಗೆ ಮತ್ತೆ ಗದ್ದುಗೆ ಹಿಡಿದು ಭವಿಷ್ಯದ ಅಸ್ವಿತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕಳೆದ ಆಡಳಿತ ಮಂಡಳಿಯ ಮೊದಲ ಅವಧಿಗೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ನಂತರ ಬದಲಾದ ರಾಜಕೀಯ ಬೆಳವಣಿಗೆಯಿಂದ ಗದ್ದುಗೆ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತು. ವಿಶೇಷವೆಂದರೆ ಮನ್‌ಮುಲ್ ಚುನಾವಣೆ ಗೆಲುವು ಹಲವರ ರಾಜಕೀಯ ಬೆಳವಣಿಗೆಗೆ ಮಹತ್ವದ ತಿರುವು ಕೊಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿಯೂ ಹಾಲಿ ಶಾಸಕ, ಮಾಜಿ ಎಂಎಲ್‌ಸಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಿರಿಯರು ಅಖಾಡದಲ್ಲಿದ್ದಾರೆ. ಇದರಿಂದಾಗಿ ಚುನಾವಣಾ ಕಣ ರಂಗೇರಿದೆ. ಅಂತೆಯೇ ಒಂದಷ್ಟು ವಿಷಯದಿಂದ ಗಮನಸೆಳೆದಿದೆ. ಅಂತೆಯೇ ಫೆ.2ರಂದು ಮಂಡ್ಯ ನಗರದಲ್ಲಿ ಮತದಾನ ನಡೆಯಲಿದ್ದು, ಸಂಜೆ ವೇಳೆಗೆ ಫಲಿತಾಂಶ ಘೋಷಣೆಯಾಗಲಿದೆ.

ಮುಖ್ಯವಾಗಿ ಚುನಾವಣೆ ಜಿಲ್ಲೆಯ ಕೆಲ ನಾಯಕರಿಗೆ ವರ್ಚಸ್ಸಿನ ಪ್ರಶ್ನೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಕೆ.ಎಂ.ಉದಯ್, ಎಚ್.ಟಿ.ಮಂಜು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಸುರೇಶ್‌ಗೌಡ ಅವರಿಗೆ ರಾಜಕೀಯದಲ್ಲಿ ತಮ್ಮ ಪ್ರಭಾವ ತೋರಿಸಲು ಚುನಾವಣೆ ಗೆಲ್ಲಬೇಕಾದ ಅನಿವಾರ್ಯತೆ ಇದೆ.

ಸಹಕಾರಿ ಕ್ಷೇತ್ರದತ್ತ ಅಪ್ಪಾಜಿಗೌಡ: ಮನ್‌ಮುಲ್ ಚುನಾವಣೆಯಲ್ಲಿ ನಾಗಮಂಗಲ ತಾಲೂಕಿನಿಂದ ಕಣಕ್ಕಿಳಿದಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಇದರೊಂದಿಗೆ ಸಹಕಾರಿ ಕ್ಷೇತ್ರದ ಚುನಾವಣೆಯತ್ತ ಮುಖ ಮಾಡಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಚುನಾವಣಾ ರಾಜಕೀಯದತ್ತ ಗಮನಹರಿಸಿದ್ದಾರೆ. ಹಿಂದೆ ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದ ಅಪ್ಪಾಜಿಗೌಡ, ತಮ್ಮ ಕ್ಷೇತ್ರದ ಜತೆಗೆ ಸಾಮಾಜಿಕ ಸಮಸ್ಯೆ, ರೈತರಿಗಾಗುತ್ತಿರುವ ತೊಂದರೆ ಬಗ್ಗೆ ಸದನದಲ್ಲಿ ಗಮನಸೆಳೆಯುತ್ತಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಮನ್‌ಮುಲ್ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ. ಇವರೊಟ್ಟಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹಾಲಿ ನಾಮನಿರ್ದೇಶಿತ ಸದಸ್ಯ ಎಸ್.ಎನ್.ಲಕ್ಷ್ಮೀನಾರಾಯಣ, ಮೈತ್ರಿ ಪಕ್ಷದ ಬೆಂಬಲಿತರಾಗಿ ಮಾಜಿ ನಿರ್ದೇಶಕ ನೆಲ್ಲಿಗೆರೆ ಬಾಲು ಹಾಗೂ ಎನ್.ಎಂ.ದೇವೇಗೌಡ ಕಣದಲ್ಲಿದ್ದಾರೆ. ನಾಗಮಂಗಲ ತಾಲೂಕಿನಲ್ಲಿ ಎರಡು ನಿರ್ದೇಶಕ ಸ್ಥಾನದ ಆಯ್ಕೆಗೆ ಮತದಾನ ನಡೆಯಲಿದೆ.

ಶಾಸಕ ಮಂಜುಗೆ ಬಂಡಾಯದ ಬಿಸಿ: ಕೆ.ಆರ್.ಪೇಟೆ ತಾಲೂಕಿನಲ್ಲಿ ಎರಡು ಸ್ಥಾನದ ಆಯ್ಕೆಗೆ ಮತದಾನ ನಡೆಯಲಿದೆ. ಇಲ್ಲಿ ಹಾಲಿ ನಿರ್ದೇಶಕರೂ ಆಗಿರುವ ಶಾಸಕ ಎಚ್.ಟಿ.ಮಂಜು ಅವರ ಸ್ಪರ್ಧೆಯಿಂದ ಕಣದ ಚಿತ್ರಣ ಬದಲಾಗಿದೆ. ಜಿಪಂ ಸದಸ್ಯರಾಗಿದ್ದ ಮಂಜು, ಬಳಿಕ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾದರು. ನಂತರ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾದರು. ಆದರೆ ವಿಧಾನಸಭಾ ಚುನಾವಣೆ ಸಮಯದಲ್ಲಿ ಮಂಜು ಜತೆಗಿದ್ದ ಹಾಲಿ ನಿರ್ದೇಶಕ ಡಾಲು ರವಿ ಮತ್ತು ಎಂ.ಬಿ.ಹರೀಶ್ ಈಗ ಎದುರಾಳಿಯಾಗಿ ಸ್ಪರ್ಧೆ ಮಾಡಿದ್ದಾರೆ. ಇದು ಶಾಸಕರ ನಿದ್ದೆಗೆಡಿಸಿದೆ. ಶಾಸಕರ ಜತೆಗೆ ಮತ್ತೊರ್ವ ಅಭ್ಯರ್ಥಿಯಾಗಿ ಎನ್.ಎಸ್.ಮಹೇಶ್ ಅಖಾಡದಲ್ಲಿದ್ದಾರೆ.

ಡಿಸಿಟಿ ವರ್ಸಸ್ ಸ್ವಾಮಿ: ಮದ್ದೂರು ತಾಲೂಕಿನಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಹಾಲಿ ನಿರ್ದೇಶಕ ಎಸ್.ಪಿ.ಸ್ವಾಮಿ ನಡುವೆ ಮತ್ತೊಮ್ಮೆ ಜಿದ್ದಾಜಿದ್ದಿನ ಹೋರಾಟಕ್ಕೆ ಮನ್‌ಮುಲ್ ಚುನಾವಣೆ ಸಾಕ್ಷಿಯಾಗಿದೆ. ಹಿಂದೆ ಎಸ್.ಪಿ.ಸ್ವಾಮಿ ಜೆಡಿಎಸ್‌ನಿಂದಲೇ ಮನ್‌ಮುಲ್ ಪ್ರವೇಶಿಸಿದ್ದರು. ಆನಂತರ ರಾಜಕೀಯ ಬೆಳವಣಿಗೆಯಿಂದ ಬಿಜೆಪಿ ಸೇರಿದರು. ಮಾತ್ರವಲ್ಲದೆ ಡಿಸಿಟಿ ಎದುರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರು. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದ ನಂತರ ಲೋಕಸಭಾ ಚುನಾವಣೆ ಒಂದೇ ವೇದಿಕೆಯಲ್ಲಿ ಕಾಣಿಸಿದ್ದರು. ಅದ್ಯಾಕೋ ಮತ್ತೆ ಇಬ್ಬರ ನಡುವೆ ರಾಜಕೀಯ ವೈರತ್ವ ಶುರುವಾಗಿದೆ. ಈ ಬಾರಿಯ ಮನ್‌ಮುಲ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ವಾಮಿಗೆ ಅವಕಾಶ ಸಿಗದಿರುವ ಹಿಂದೆ ತಮ್ಮಣ್ಣ ಪಾತ್ರವಿದೆ ಎನ್ನುವ ಗುಸುಗುಸು ತಾಲೂಕಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಮೈತ್ರಿ ಬೆಂಬಲಿತ ಅಭ್ಯರ್ಥಿಗಳಾಗಿ ಎಂ.ರೂಪಾ ಮತ್ತು ಎನ್.ಮಹೇಶ್, ಕಾಂಗ್ರೆಸ್ ಬೆಂಬಲಿತರಾಗಿ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಶಾಸಕ ಉದಯ್ ಸಂಬಂಧಿ ಎಂ.ಕೆ.ಹರೀಶ್‌ಬಾಬು ಕಣಕ್ಕಿಳಿದಿದ್ದಾರೆ. ತಾಲೂಕಿನಿಂದ ಅನಿಲ್‌ಕುಮಾರ್ ಎಂಬುವರು ಸ್ಪರ್ಧೆ ಮಾಡಿದ್ದಾರೆ.

ಸಿ.ಎಸ್.ಪುಟ್ಟರಾಜುಗೆ ಪ್ರತಿಷ್ಠೆ: ಪಾಂಡವಪುರ ತಾಲೂಕಿನ ಏಕೈಕ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ. ಆದ್ದರಿಂದ ಇಲ್ಲಿ ನೇರ ಹಣಾಹಣಿ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಸಹೋದರನ ಮಗ ಸಿ.ಶಿವಕುಮಾರ್ ಕಣಕ್ಕಿಳಿದಿದ್ದಾರೆ. ಅಂತೆಯೇ ಕಾಂಗ್ರೆಸ್ ಮತ್ತು ರೈತ ಸಂಘದ ಬೆಂಬಲಿತರಾಗಿ ಹಾಲಿ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸ್ಪರ್ಧೆಗಿಳಿದಿದ್ದಾರೆ. ಹಿಂದೆ ಜೆಡಿಎಸ್‌ನಲ್ಲಿದ್ದ ರಾಮಚಂದ್ರು ನಂತರ ಕಾಂಗ್ರೆಸ್ ಸೇರಿದಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುಟ್ಟರಾಜು ವಿರುದ್ಧ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಿಯನ್ನು ಗೆಲ್ಲಿಸಿ ರಾಮಚಂದ್ರುಗೆ ತಿರುಗೇಟು ನೀಡಲು ಸಿಎಸ್‌ಪಿ ಪಣ ತೊಟ್ಟಿದ್ದಾರೆ.

ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ವಿಶ್ವನಾಥ್: ಮಳವಳ್ಳಿ ತಾಲೂಕಿನಲ್ಲಿ ಒಂದು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ನಡೆಯಲಿದೆ. ಅಂತೆಯೇ ಜೆಡಿಎಸ್ ಬೆಂಬಲಿತರಾಗಿ ವಿಶ್ವನಾಥ್ ಸ್ಪರ್ಧೆ ಮಾಡಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಎರಡನೇ ಸಲ ಆಯ್ಕೆಯಾದ ವೇಳೆ ಕೆಎಂಎಫ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇವರಿಗೆ ಎದುರಾಳಿಯಾಗಿ ಹಾಪ್‌ಕಾಮ್ಸ್ ಮಾಜಿ ಜಿಲ್ಲಾಧ್ಯಕ್ಷ ಗುತ್ತಿಗೆದಾರ ಡಿ.ಕೃಷ್ಣೇಗೌಡ ಕಾಂಗ್ರೆಸ್ ಬೆಂಬಲಿತರಾಗಿ ಸ್ಪಧೆ ಮಾಡಿದ್ದಾರೆ.

ಮಂಡ್ಯದಲ್ಲಿ ಐವರ ಪೈಪೋಟಿ: ಮಂಡ್ಯ ತಾಲೂಕಿನಲ್ಲಿ ಮೂರು ಸ್ಥಾನದ ಆಯ್ಕೆಗೆ ಐವರು ಪೈಪೋಟಿ ನಡೆಸಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿ ಹಾಲಿ ನಿರ್ದೇಶಕ ಯು.ಸಿ.ಶಿವಕುಮಾರ್ ಮತ್ತು ಕೆ.ರಾಜು ಅಖಾಡಲ್ಲಿದ್ದಾರೆ. ಅಂತೆಯೇ ಜೆಡಿಎಸ್ ಬೆಂಬಲಿತರಾಗಿ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಹಾಗೂ ವಿಜಯಕುಮಾರ್ ಸ್ಪರ್ಧಿಸಿದ್ದಾರೆ.

ಬೋರೇಗೌಡರಿಗೆ ಇಬ್ಬರ ಸವಾಲು: ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹಾಲಿ ಅಧ್ಯಕ್ಷ ಬಿ.ಬೋರೇಗೌಡ ಅವರು ದಾಖಲೆ ಬರೆದಿದ್ದಾರೆ. ಮನ್‌ಮುಲ್ ಚುನಾವಣೆಯಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿ ಐದನೇ ಬಾರಿ ಅಖಾಡದಲ್ಲಿದ್ದಾರೆ. ಇವರಿಗೆ ಎಂ.ಕಿಶೋರ್ ಹಾಗೂ ಎಚ್.ಎಂ.ಪುಟ್ಟಸ್ವಾಮಿಗೌಡ ಎದುರಾಳಿಯಾಗಿದ್ದಾರೆ.