ಜಿಲ್ಲೆ

ಮನ್ಮುಲ್ ಸೂಪರ್‌ಸೀಡೋ, ಚುನಾವಣೆಯೋ?: ಗದ್ದುಗೆ ಏರಲು ತೀವ್ರ ತಂತ್ರಗಾರಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರತಿಷ್ಠಿತ ಸಹಕಾರ ಸಂಸ್ಥೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್)ದ ಅಧ್ಯಕ್ಷ ಸ್ಥಾನಕ್ಕೆ ಜು.6ರಂದು ಚುನಾವಣೆ ನಿಗದಿಯಾಗಿದೆ. ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ತಂತ್ರಗಾರಿಕೆ ನಡೆಸುತ್ತಿದ್ದು, ಬಿಜೆಪಿ ಕೂಡ ಅವಕಾಶಕ್ಕಾಗಿ ಕಾಯುತ್ತಿದೆ. ಈ ನಡುವೆ ಚುನಾವಣೆ ನಡೆಯುತ್ತೋ ಅಥವಾ ಆಡಳಿತ ಮಂಡಳಿಯನ್ನು ರಾಜ್ಯ ಸರ್ಕಾರ ಸೂಪರ್‌ಸೀಡ್ ಮಾಡಲಿದೆಯೇ ಎನ್ನುವ ಮಾತು ಕೇಳಿಬರುತ್ತಿದೆ.

12 ನಿರ್ದೇಶಕ ಬಲದ ಮನ್‌ಮುಲ್‌ನಲ್ಲಿ ಜೆಡಿಎಸ್ ಬೆಂಬಲಿತ ಎಂಟು ಜನರು ಆಯ್ಕೆಯಾಗಿದ್ದರು. ಈ ಪೈಕಿ ಮದ್ದೂರಿನಿಂದ ಆಯ್ಕೆಯಾಗಿದ್ದ ಎಸ್.ಪಿ.ಸ್ವಾಮಿ ಬಿಜೆಪಿ ಸೇರಿದರು. ಅಂತೆಯೇ ಬಿಜೆಪಿಯಿಂದ ರೂಪಾ ಚುನಾಯಿತರಾಗಿದ್ದ ಹಿನ್ನೆಲೆಯಲ್ಲಿ ಕಮಲ ಪಾಳಯದ ಬಲ ಎರಡಕ್ಕೇರಿತ್ತು. ಇನ್ನು ಕಾಂಗ್ರೆಸ್ ಬೆಂಬಲಿತ ಮೂವರು ಚುನಾಯಿತರಾಗಿದ್ದರು. ಬಹುಮತದ ಆಧಾರದಲ್ಲಿ ಜೆಡಿಎಸ್‌ನಿಂದ ಬಿ.ಆರ್.ರಾಮಚಂದ್ರು ಅಧ್ಯಕ್ಷರಾದರು. ಆದರೆ ಪಕ್ಷದ ಸೂಚನೆಯಂತೆ ಇತ್ತೀಚೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಚುನಾವಣೆ ಎದುರಾಗಿದೆ.

ಜೆಡಿಎಸ್, ಬಿಜೆಪಿ ಮೈತ್ರಿ?: ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಜೆಡಿಎಸ್ ಬೆಂಬಲಿತ ಕಾಡೇನಹಳ್ಳಿ ರಾಮಚಂದ್ರು ಕಾಂಗ್ರೆಸ್ ಪಾಳಯ ಸೇರಿದರೆ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಡಾಲು ರವಿ ಜೆಡಿಎಸ್ ಸೇರ್ಪಡೆಯಾದರು. ಆದ್ದರಿಂದ ಅಂಕಿ ಅಂಶದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೂವರ ನಿರ್ದೇಶಕರ ಜತೆಗೆ ಸರ್ಕಾರದ ನಾಲ್ಕು ನಾಮನಿರ್ದೇಶಿತ ಸ್ಥಾನ ಸೇರಿದರೆ ಕಾಂಗ್ರೆಸ್‌ನ ಸಂಖ್ಯಾಬಲ ಏಳಕ್ಕೆ ಏರಿಕೆಯಾಗಲಿದೆ. ಅತ್ತ ಜೆಡಿಎಸ್ ಸದಸ್ಯ ಬಲವೂ ಏಳು ಇದೆ. ಆದ್ದರಿಂದ ಅಧ್ಯಕ್ಷಗಾದಿ ಹಿಡಿಯಲು ಎರಡು ಪಕ್ಷದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇದಕ್ಕಾಗಿ ಎರಡು ಪಕ್ಷದವರೂ ಬಿಜೆಪಿ ಬೆಂಬಲ ಅಪೇಕ್ಷಿಸಿದರೂ ಅಚ್ಚರಿಯಿಲ್ಲ. ಇದಲ್ಲದೆ ಒಂದು ಹೆಜ್ಜೆ ಮುಂದಿಟ್ಟಿರುವ ಕಾಂಗ್ರೆಸ್ ನಿರ್ದೇಶಕರು, ಜೆಡಿಎಸ್ ಬೆಂಬಲಿತ ನಿರ್ದೇಶಕರನ್ನು ಸೆಳೆಯುವ ಯತ್ನಕ್ಕೆ ಮುಂದಾಗಿದ್ದಾರೆ.

ಈ ನಡುವೆ ರಾಜ್ಯ ಸರ್ಕಾರ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಬಹುದೆನ್ನುವ ಮಾತು ಕೇಳಿಬರುತ್ತಿದೆ. ಇದರ ಬಗ್ಗೆ ಜು.5ರೊಳಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಚುನಾವಣೆ ಎದುರಾದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದಕ್ಕೆ ಪೂರಕವೆನ್ನುವಂತೆ ರಾಜ್ಯಮಟ್ಟದ ನಾಯಕರೇ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಪರೋಕ್ಷವಾಗಿ ಮಾತನಾಡಿದ್ದಾರೆನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನ್‌ಮುಲ್ ಗದ್ದುಗೆಗಾಗಿ ಮೈತ್ರಿ ಲೆಕ್ಕಾಚಾರ ಚಾಲ್ತಿಗೆ ಬಂದಿರೆ ಅಧ್ಯಕ್ಷ ಸ್ಥಾನಕ್ಕೆ ಮದ್ದೂರಿನ ಎಸ್.ಪಿ.ಸ್ವಾಮಿ ಹಾಗೂ ನಾಗಮಂಗಲದ ನೆಲ್ಲಿಗೆರೆ ಬಾಲು ನಡುವೆ ಪೈಪೋಟಿ ಏರ್ಪಡಬಹುದು. ಅಂತಿಮವಾಗಿ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಲಿದೆ.

ಕಾಂಗ್ರೆಸ್‌ನಿಂದ ಶಿವಪ್ಪ ಮುಂಚೂಣಿ: ಇತ್ತ ಕಾಂಗ್ರೆಸ್ ಪಾಳಯ ಕೂಡ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಯು.ಸಿ.ಶಿವಕುಮಾರ್(ಉಮ್ಮಡಹಳ್ಳಿ ಶಿವಪ್ಪ) ಹಾಗೂ ಶ್ರೀರಂಗಪಟ್ಟಣದ ಬೋರೇಗೌಡ ಆಕಾಂಕ್ಷಿಯಾಗಿದ್ದಾರೆ. ಶಿವಪ್ಪ ಹೆಸರು ಮುಂಚೂಣಿಯಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿದ್ದರು. ವರಿಷ್ಠರ ಸೂಚನೆ ಮೇರೆಗೆ ಸುಮ್ಮನಾಗಿದ್ದರು. ಇದೀಗ ಅವಕಾಶ ಕೊಡುವ ಸಾಧ್ಯತೆ ನಿಚ್ಚಳವಾಗಿದೆ.

ಕಾಂಗ್ರೆಸ್‌ನ ಮೂವರು ನಿರ್ದೇಶಕರ ಜತೆಗೆ ಸಹಕಾರ ಇಲಾಖೆ ಉಪನಿಬಂಧಕ, ಪಶುಪಾಲನೆ ಇಲಾಖೆ ಉಪನಿರ್ದೇಶಕ ಹಾಗೂ ಕೆಎಂಎಫ್‌ನ ಪ್ರತಿನಿಧಿ ಸೇರಿ ನಿರ್ದೇಶಕರ ಸಂಖ್ಯೆ ಆರಕ್ಕೆ ಏರಲಿದೆ. ಇದರೊಟ್ಟಿಗೆ ಸರ್ಕಾರದಿಂದ ಒಂದು ಸ್ಥಾನಕ್ಕೆ ನಾಮನಿರ್ದೇಶಕರಾಗಲು ಅವಕಾಶವಿರುವುದರಿಂದ ಪೈಪೋಟಿ ಹೆಚ್ಚಾಗಿದೆ. ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹಾಗೂ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹೆಸರು ಕೇಳಿಬರುತ್ತಿದೆ. ಒಂದು ವೇಳೆ ಇವರಲ್ಲಿ ಯಾರೇ ನಾಮನಿರ್ದೇಶನಗೊಂಡರೆ ಮತ್ತು ಚುನಾವಣೆ ನಡೆದರೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಕೇಳುವುದು ಖಚಿತ.

ಸಿಎಂಗೆ ಸೂಪರ್‌ಸೀಡ್ ಆಸಕ್ತಿ?: ಒಂದೆಡೆ ಚುನಾವಣೆ ಘೋಷಣೆಯಾಗಿ ನಿರ್ದೇಶಕರಿಗೆ ಲಿಖಿತ ಮಾಹಿತಿಯನ್ನು ಕೊಡಲಾಗಿದೆ. ಇದರಿಂದಾಗಿ ಅಧಿಕಾರ ಹಿಡಿಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬೆಳವಣಿಗೆಯ ನಡುವೆ ಹಾಲಿ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ತೋರುತ್ತಿದ್ದಾರೆನ್ನಲಾಗುತ್ತಿದೆ. ಇದಕ್ಕೆ ಕೆಲ ಕಾರಣವೂ ಇದೆ.

ಮನ್‌ಮುಲ್‌ನಲ್ಲಿ ನಡೆದ ಹಾಲಿಗೆ ನೀರು ಮಿಶ್ರಣ ಮಾಡಿ ಕೋಟ್ಯಂತರ ರೂ ವಂಚಿಸಿದ ಹಗರಣದ ಬಗ್ಗೆ ಸಿದ್ದರಾಮಯ್ಯ ಹಾಗೂ ಎನ್.ಚಲುವರಾಯಸ್ವಾಮಿ ದನಿ ಎತ್ತಿದ್ದರು. ಜೆಡಿಎಸ್ ಆಡಳಿತ ಮಂಡಳಿಯಿದ್ದ ಕಾರಣ ಸೂಪರ್‌ಸೀಡ್ ಮಾಡಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಮಾತ್ರವಲ್ಲದೆ ವಿಧಾನಸಭಾ ಚುನಾವಣೆ ಪೂರ್ವದಲ್ಲಿಯೂ ಮನ್‌ಮುಲ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಮಾತನಾಡಿದ್ದರು. ಒಕ್ಕೂಟದಲ್ಲಿ ನಡೆದಿರುವ ಹಗರಣದ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದರು.

ಮತ್ತೊಂದೆಡೆ ಪ್ರಸ್ತುತ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಬಲ ಹೊಂದಿದೆ. ಒಂದು ವೇಳೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದರೆ ಅಧಿಕಾರ ‘ಕೈ’ಯಿಂದ ತಪ್ಪುವುದು ಖಚಿತ. ಇದರಿಂದ ಸರ್ಕಾರವಿದ್ದರೂ ಗದ್ದುಗೆ ಉಳಿಸಿಕೊಳ್ಳಲು ಸಾಧ್ಯವಾಗದೇ ವಿಪಕ್ಷದ ಎದುರು ಮುಖಭಂಗ ಅನುಭವಿಸಬೇಕಾಗುತ್ತದೆ. ಅಂತೆಯೇ ಮೈತ್ರಿ ಆಗದಿದ್ದರೂ ಅಧಿಕಾರಕ್ಕಾಗಿಯಾದರೂ ಸರ್ಕಸ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದರ ಬದಲು ಭ್ರಷ್ಟಾಚಾರದ ಆರೋಪವಿರುವುದರಿಂದ ಹಾಲಿ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ ಚುನಾವಣೆ ಎದುರಿಸಬಹುದು. ಜತೆಗೆ ಜಿಲ್ಲೆಯ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಂತೆಯೂ ಆಗಲಿದೆ ಎನ್ನುವ ಲೆಕ್ಕಾಚಾರವಿದೆ. ಈ ಎಲ್ಲ ಕುತೂಹಲಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.